Western Ghat voice daily news* ಕಾಂಗ್ರೆಸ್ ಶಾಸಕ ಸತೀಶ್ ಸೈಲ್ ಮನೆ ಮೇಲೆ ದಾಳಿ ನಡೆಸಿದ್ದ ಇ.ಡಿ ಕೋಟ್ಯಂತರ ರೂ. ಹಣ ಹಾಗೂ ಚಿನ್ನದ ಬಿಸ್ಕೆಟ್‌ಗಳನ್ನು ವಶಕ್ಕೆ ಪಡೆದಿದೆ.
1.68 ಕೋಟಿ ನಗದು, 6.75 ಕೆಜಿ ಚಿನ್ನದ ಬಿಸ್ಕೆಟ್‌ಗಳು ಮತ್ತು 14.13 ಕೋಟಿ ಹಣ ಹೊಂದಿರುವ ಬ್ಯಾಂಕ್ ಖಾತೆಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
ಅಕ್ರಮ ಅದಿರು ಪ್ರಕರಣದಲ್ಲಿ ಜಾಮೀನಿನ ಮೇಲೆ ಶಾಸಕ ಸತೀಶ್ ಸೈಲ್ ಹೊರಗಿದ್ದಾರೆ. ಆ.13 ಮತ್ತು 14 ರಂದು ಇ.ಡಿ ಅಧಿಕಾರಿಗಳು, ಶಾಸಕರ ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದ್ದರು. ಈ ವೇಳೆ ಅಪಾರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆಯನ್ನು ಸತೀಶ್ ಸೈಲ್ ಎದುರಿಸುತ್ತಿದ್ದಾರೆ. ಪ್ರಕರಣ ಹೈಕೋರ್ಟ್‌ನಲ್ಲಿ ವಿಚಾರಣೆ ಹಂತದಲ್ಲಿರುವ ಹೊತ್ತಲ್ಲೇ ಇ.ಡಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಕಾರವಾರ (ಉತ್ತರ ಕನ್ನಡ), ಗೋವಾ, ಮುಂಬೈ ಮತ್ತು ನವದೆಹಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ನಡೆಸಲಾಗಿದೆ.
ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ಗೆ ಜನಪ್ರತಿನಿಧಿಗಳ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿತ್ತು. ನಂತರ ಅವರು ಹೈಕೋರ್ಟ್ನಲ್ಲಿ ಜಾಮೀನು ಪಡೆದುಕೊಂಡಿದ್ದರು.
ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ಸಾಗಾಟ ಮಾಡಿದ ಪ್ರಕರಣದಲ್ಲಿ ಸತೀಶ್ ಸೈಲ್ ಅವರನ್ನು ದೋಷಿ ಎಂದು ಕಳೆದ ವರ್ಷ ಅಕ್ಟೋಬರ್ನಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಪು ನೀಡಿತ್ತು. ನಂತರ ಬೇಲೆಕೇರಿ ಅದಿರು ಸಾಗಾಟ ಪ್ರಕರಣ ಸಂಬಂಧಿತ 6 ಪ್ರಕರಣಗಳಲ್ಲಿ ಅವರಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 44 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ದಂಡ ವಿಧಿಸಲಾಗಿತ್ತು.