ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದಲ್ಲಿ ಇರುವ ಸರಕಾರಿ ಆಸ್ಪತ್ರೆ ಕೇವಲ ಹೆಸರಿಗೆ ಮಾತ್ರ. ಈ ಆಸ್ಪತ್ರೆಯಲ್ಲಿ ಎಲ್ಲ ಸೌಕರ್ಯವಿದೆ. ಆದರೆ ಇಲ್ಲಿ ಚಿಕಿತ್ಸೆ ನೀಡಲು ವೈದ್ಯರುಗಳೇ ಇಲ್ಲ. ಜ್ವರ, ನೆಗಡಿಯಂತ ಬೇರೆ ಕಾಯಿಲೆ ಬಂದರೆ ದಂತ ವೈದ್ಯರೇ ಚಿಕಿತ್ಸೆ ಕೊಡುತ್ತಾರೆ. ಇಲ್ಲಿ ಕೇವಲ ಮೂವರು ವೈದ್ಯರಿದ್ದು, ಸಾಮಾನ್ಯ ಕಾಯಿಲೆಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡುತ್ತಾರೆ.
ಶಸ್ತ್ರಚಿಕಿತ್ಸೆ ಕೊಠಡಿ ಕೂಡಾ ಹೆಸರಿಗೆ ಮಾತ್ರ. ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಹೈಟೆಕ್ ಸಂಪನ್ಮೂಲಗಳಿದ್ದರೂ ಶಸ್ತ್ರಚಿಕಿತ್ಸಕರು ಇಲ್ಲ. ಮಕ್ಕಳ ತಜ್ಞರು ಮತ್ತು ಸ್ತ್ರೀ ರೋಗ ತಜ್ಞರು ನೇಮಕವಾಗಿದ್ದರೂ ಡ್ಯೂಟಿಗೆ ಬರುವುದಕ್ಕೆ ಹಿಂದೇಟು ಹಾಕುತ್ತಿದ್ದಾರಂತೆ. ಗಜೇಂದ್ರಗಡ ಪಟ್ಟಣ ಗದಗ ಜಿಲ್ಲೆಯ ಗಡಿ ಭಾಗದ ತಾಲೂಕು. ಇದು ಬಾಗಲಕೋಟೆ, ಕೊಪ್ಪಳ ಜಿಲ್ಲೆಯ ಗಡಿ ಹಳ್ಳಿಗೆ ಹೊಂದಿಕೊಂಡಿದೆ. ಕೊಪ್ಪಳದ ಕುಷ್ಟಗಿ, ಯಲಬುರ್ಗಾ, ಕುಕನೂರು, ಬಾಗಲಕೋಟೆ ಜಿಲ್ಲೆಯ ಬದಾಮಿ, ಹುನಗುಂದ ಮತ್ತು ಇಲಕಲ್ ತಾಲೂಕಿನ ಹಳ್ಳಿಗಳ ಜನರಿಗೆ ಇದೇ ಆಸ್ಪತ್ರೆ ಸಂಜೀವಿನಿ ಇದ್ದಂತೆ.ಸ್ತ್ರೀ ರೋಗ ತಜ್ಞರು, ಮಕ್ಕಳ ತಜ್ಞರು, ಶಸ್ತ್ರಚಿಕಿತ್ಸಿಕರ ಕೊರತೆ ಇದೆ. ಇದರಿಂದ ತುರ್ತಾಗಿ ಗರ್ಭಿಣಿಯರಿಗೆ ಚಿಕಿತ್ಸೆ ಬೇಕಾದಲ್ಲಿ ನೂರು ಕಿ.ಮೀ ದೂರದಲ್ಲಿರುವ ಜಿಮ್ಸ್ ಆಸ್ಪತ್ರೆಗೆ ರವಾನಿಸುವ ಪರಿಸ್ಥಿತಿ ಇದೆ. ಇದರಿಂದ ಸ್ವಲ್ಪ ಯಾಮಾರಿದರೂ ರೋಗಿಗೆ ಅಪಾಯ ಕಟ್ಟಿಟ್ಟ ಬುತ್ತಿ ಅಂತ ಸ್ಥಳೀಯ ಎಚ್.ಎಸ್.ಸೋಂಪುರ ಕಿಡಿಕಾರಿದ್ದಾರೆ.
ಇಲ್ಲಿ ವೈದ್ಯರು ಮತ್ತು ನರ್ಸ್ಗಳ ಕೊರತೆ ಇರುವುದು ನಿಜ. ಇದರಿಂದ ರೋಗಿಗಳು ಚಿಕಿತ್ಸೆಗೆ ಸ್ವಲ್ಪ ಸಮಸ್ಯೆ ಇದೆ. ಇರುವ ಸಿಬ್ಬಂದಿಯಲ್ಲಿಯೇ ಚಿಕಿತ್ಸೆ ನೀಡಿ ಸಮಯ ಪ್ರಜ್ಞೆ ಮೆರೆಯುತ್ತಿದ್ದೇವೆ ಅಂತ ಇಲ್ಲಿನ ವೈದ್ಯಾಧಿಕಾರಿ ಡಾ.ರಮೇಶ್ ಹೇಳಿದ್ದಾರೆ.