*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*ನಿವೃತ್ತಿ ಅಂಚಲ್ಲಿ 86,000 ಸಿಬ್ಬಂದಿ! ಮುಂದಿನ 5 ವರ್ಷದಲ್ಲಿ ಇಲಾಖೆಯಲ್ಲಿ ಖಾಲಿ ಖಾಲಿ.

 *ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್: ರಾಜ್ಯ ಸರ್ಕಾರದ ವಿವಿಧ ಇಲಾಖೆ ಹಾಗೂ ನಿಗಮ ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ ಆತಂಕಕಾರಿ ಮಟ್ಟಕ್ಕೆ ತಲುಪುತ್ತಿರುವಂತೆಯೇ ಆಡಳಿತ ಯಂತ್ರದ ಸುಗಮ ಚಾಲನೆ ಸವಾಲಾಗಿ ಪರಿಣಮಿಸುವ ಲಕ್ಷಣ ಗೋಚರಿಸಿದೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಸದ್ಯ ವಿವಿಧ ಇಲಾಖೆಗಳಲ್ಲಿ 2.84 ಲಕ್ಷಕ್ಕೂ ಅಧಿಕ ಹುದ್ದೆ ಭರ್ತಿಯಾಗದೆ ಉಳಿದಿವೆ. 
ಇದರೊಂದಿಗೆ ನಿಗಮ ಮಂಡಳಿಗಳಲ್ಲಿ 1 ಲಕ್ಷಕ್ಕೂ ಅಧಿಕ ಖಾಲಿ ಹುದ್ದೆಗಳೂ ಸೇರ್ಪಡೆಯಾಗಿವೆ. ಇಂತಹ ಪರಿಸ್ಥಿತಿಯಲ್ಲೇ ಮುಂದಿನ ಐದು ವರ್ಷಗಳ ಅವಧಿಯಲ್ಲಿ ಸುಮಾರು 86,398 ನೌಕರರು ವಯೋನಿವೃತ್ತಿ ಹೊಂದಲಿದ್ದಾರೆ ಎಂದು ಸರ್ಕಾರ ಅಂದಾಜಿಸಿದೆ. ಇಲಾಖೆಗಳಲ್ಲಿ ನೌಕರರ ಕೊರತೆ ತೀವ್ರವಾಗಿದ್ದರೂ, ನಿವೃತ್ತಿಯಿಂದ ತೆರವಾಗುವ ಹುದ್ದೆ ತುಂಬಲು ಪೂರಕವಾದ ವೇಗದಲ್ಲಿ ನೇಮಕಾತಿ ನಡೆಯುತ್ತಿಲ್ಲ ಎಂಬುದು ಅಭ್ಯರ್ಥಿಗಳ ಆತಂಕಕ್ಕೆ ಕಾರಣ. ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯದಂತಹ ಸಾರ್ವಜನಿಕ ಸೇವಾ ವಲಯಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆ ಹೆಚ್ಚಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಸುಮಾರು 79,694 ಹುದ್ದೆಗಳು ಖಾಲಿ ಇರುವುದು ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 37,572 ಹುದ್ದೆ ಭರ್ತಿಯಾಗಬೇಕಿದೆ. ಇದೇ ವೇಳೆ ಗುತ್ತಿಗೆ ನೌಕರರ ಮೇಲಿನ ಅವಲಂಬನೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಹುದ್ದೆ ಖಾಲಿಯಾಗುತ್ತಿದ್ದರೂ, ಕಳೆದ ಮೂರು ವರ್ಷಗಳಲ್ಲಿ (2023- 2025) ಕೆಪಿಎಸ್ಸಿ ಮತ್ತು ಕೆಇಎ ಮೂಲಕ ಕೇವಲ 8,157 ಹುದ್ದೆಗಳ ನೇಮಕಾತಿ ಪೂರ್ಣಗೊಂಡಿರುವುದು ಆಡಳಿತಾತ್ಮಕ ಹಿನ್ನಡೆ ಬಿಂಬಿಸುತ್ತದೆ. 

ಇದಕ್ಕೆ ಕಾನೂನಾತ್ಮಕ ಸವಾಲು ಮತ್ತು ಒಳಮೀಸಲು ವಿಚಾರ ಪ್ರಮುಖ ಕಾರಣ. ಪ್ರತಿ ವರ್ಷ ಸರಾಸರಿ 17 ಸಾವಿರಕ್ಕೂ ಹೆಚ್ಚು ನೌಕರರು ಸೇವೆಯಿಂದ ನಿರ್ಗಮಿಸುತ್ತಿರುವಾಗ, ಅದಕ್ಕೆ ತಕ್ಕಂತೆ ಹೊಸಬರ ನೇಮಕವಾಗದೆ ಇರುವುದು ಸರ್ಕಾರಿ ಸೇವೆ ವಿತರಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಒಟ್ಟಾರೆ, ನಿವೃತ್ತಿಯಿಂದ ಉಂಟಾಗುವ ಶೂನ್ಯ ತುಂಬಲು ಮತ್ತು ಸಾರ್ವಜನಿಕ ಕೆಲಸ ಚುರುಕುಗೊಳಿಸಲು ಸರ್ಕಾರವು ಸಮರೋಪಾದಿಯಲ್ಲಿ ಹೊಸ ನೇಮಕಾತಿ ಅಧಿಸೂಚನೆ ಹೊರಡಿಸಬೇಕಿದೆ. ಇಲ್ಲದಿದ್ದರೆ ಮುಂದಿನ ಐದು ವರ್ಷಗಳಲ್ಲಿ ಆಡಳಿತ ವ್ಯವಸ್ಥೆ ಸಿಬ್ಬಂದಿ ಕೊರತೆಯಿಂದಾಗಿ ಮತ್ತಷ್ಟು ಹದಗೆಡುವ ಅಪಾಯವಿದೆ ಎಂಬ ಆತಂಕ ಹಿರಿಯ ಅಧಿಕಾರಿಗಳ ವಲಯದಲ್ಲಿದೆ.

ನಿವೃತ್ತಿ ಆಗಲಿರುವ ನೌಕರರು (2026-2030) 86,398
2026 16,513 
 2027 16,800 
 2028 17,726
2029 18,100
2030 17,259
ನೇಮಕಾತಿ ಪ್ರಗತಿ
2023ರಲ್ಲಿ ಕೆಪಿಎಸ್ಸಿಯಿಂದ ಆರು ಅಧಿಸೂಚನೆ 824 ಹುದ್ದೆ (ಪರೀಕ್ಷಾ ಪೂರ್ವ ಪ್ರಕ್ರಿಯೆ)
2024ರಲ್ಲಿ ಕೆಪಿಎಸ್ಸಿ ಮೂಲಕ 13 ಅಧಿಸೂಚನೆ 1251 ಹುದ್ದೆ (ಪರೀಕ್ಷಾ ಕಾರ್ಯ ನಡೆದಿದೆ)
2025ರಲ್ಲಿ ಕೆಇಎನಿಂದ 4 ಅಧಿಸೂಚನೆ ಹೊರಟಿದ್ದು 1006 ಹುದ್ದೆ (ಪರೀಕ್ಷೆ ನಿಗದಿಯಾಗಿದೆ)
ಒಟ್ಟು ಖಾಲಿ ಹುದ್ದೆ (ಇಲಾಖೆವಾರು)
2,84,881 ನಿಗಮ ಮಂಡಳಿಗಳ ಖಾಲಿ ಹುದ್ದೆ 1,01,295
ಹೆಚ್ಚು ಹುದ್ದೆ ಖಾಲಿ ಇರುವ ಇಲಾಖೆ
ಶಾಲಾ ಶಿಕ್ಷಣ ಮತ್ತು ಸಾಕ್ಷರತೆ 79,694 ಹುದ್ದೆ 
 ಆರೋಗ್ಯ, ವೈದ್ಯಕೀಯ ಶಿಕ್ಷಣ 37,572 ಹುದ್ದೆ
 ಒಳಾಡಳಿತ 28,188 ಹುದ್ದೆ
 ಉನ್ನತ ಶಿಕ್ಷಣ 13,599 ಹುದ್ದೆ
ಪರಿಣಾಮಗಳೇನು?
ಒಬ್ಬ ನೌಕರನ ಮೇಲೆ ಹೆಚ್ಚುವರಿ ಜವಾಬ್ದಾರಿ ಇರುವುದರಿಂದ ಕೆಲಸ ವಿಳಂಬವಾಗುತ್ತವೆ
ಕಡತ ವಿಲೇವಾರಿ ಆಮೆಗತಿಯಲ್ಲಿ ಸಾಗಿ ಜನರಿಗೂ ಸಮಸ್ಯೆ, ಯೋಜನೆ ಅನುಷ್ಠಾನ ವಿಳಂಬ
ಹೊರಗುತ್ತಿಗೆ ನಂಬಿಕೊಂಡು ಸರ್ಕಾರ ನಡೆಸುವುದು ಕಷ್ಟಸಾಧ್ಯ. ಆಡಳಿತಾತ್ಮಕ ಗುಣಮಟ್ಟವೂ ವ್ಯತ್ಯಾಸವಾಗಲಿದೆ
ತರಬೇತಿರಹಿತ ಸಿಬ್ಬಂದಿಯಿಂದಾಗಿ ಆಡಳಿತದ ಗುಣಮಟ್ಟ ಹದಗೆಡಬಹುದು
ಕಳೆದ 3 ವರ್ಷಗಳ ನೇಮಕ
ಕೆಪಿಎಸ್ಸಿ ಮೂಲಕ 2023 ಮತ್ತು 24ರಲ್ಲಿ ಆದ ಅಧಿಸೂಚನೆ 10, ಹುದ್ದೆ- 1,603
ಕೆಇಎ ಮೂಲಕ 2023 ಮತ್ತು 24ರಲ್ಲಾದ ಅಧಿಸೂಚನೆ 17, ಹುದ್ದೆ- 6,554
ಸರ್ಕಾರಕ್ಕಿರುವ ದಾರಿ
1. ಒಳಮೀಸಲು ಬಿಕ್ಕಟ್ಟಿಗೆ ಪರಿಹಾರ ಹುಡುಕಿ ಆದ್ಯತೆ ಮೇಲೆ ‘ನೇಮಕಾತಿ ವರ್ಷ’ ಘೋಷಿಸುವುದು

2. ಯುಪಿಎಸ್ಸಿ ಮಾದರಿ ವಾರ್ಷಿಕ ನೇಮಕಾತಿ ಕ್ಯಾಲೆಂಡರ್ ಜಾರಿಗೆ ತರುವ ಮೂಲಕ ಚೌಕಟ್ಟು ವಿಧಿಸುವುದು

3. ತಾಂತ್ರಿಕ ಹುದ್ದೆಗಳಿಗೆ ನೇರ ನೇಮಕಾತಿ ಚುರುಕುಗೊಳಿಸುವ ಮಾರ್ಗಗಳನ್ನು ಕಂಡುಕೊಳ್ಳುವುದು

4. ನೇಮಕ ಅಧಿಸೂಚನೆಗಳು ಕೋರ್ಟ್ ಮೆಟ್ಟಿಲೇರದಂತೆ ತಡೆಯಲು ಆರಂಭದಲ್ಲೇ ಎಚ್ಚರಿಕೆ ವಹಿಸುವುದು

PGK

Post a Comment

Previous Post Next Post