ಯಲ್ಲಾಪುರ: ಯಲ್ಲಾಪುರ ತಾಲೂಕಿನ ಉಮ್ಮಚಗಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ಕಳ್ಳರು ಕನ್ನ ಹಾಕಲು ಯತ್ನಿಸಿದ್ದು, ಈ ವೇಳೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಬ್ಯಾಂಕಿನಲ್ಲಿದ್ದ 2 ಲಕ್ಷಕ್ಕೂ ಅಧಿಕ ಮೌಲ್ಯದ ಕಂಪ್ಯೂಟರ್‌ಗಳು ಮತ್ತು ಇತರೆ ವಿದ್ಯುನ್ಮಾನ ಉಪಕರಣಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
ಮಂಗಳವಾರ ಸಂಜೆ ಯಿಂದ ಬುಧವಾರ ಬೆಳಿಗ್ಗೆ 8 ಗಂಟೆಯ ನಡುವಿನ ಅವಧಿಯಲ್ಲಿ ನಡೆದಿದೆ. ಬ್ಯಾಂಕಿನ ಕಿಟಕಿಯನ್ನು ಗ್ಯಾಸ್ ಕಟರ್‌ನಿಂದ ಕತ್ತರಿಸಿ ಒಳನುಗ್ಗಿರುವ ದುಷ್ಕರ್ಮಿಗಳು, ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಬ್ಯಾಂಕಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ.
ಬ್ಯಾಂಕಿನ ಗ್ರಾಹಕ ಸೇವಾ ಸಹಾಯಕ (CSA) ರಾಘವೇಂದ್ರ ಗಣಪತಿ ನಾಯಕ ಅವರು ನೀಡಿದ ದೂರಿನ ಪ್ರಕಾರ, ಕಳ್ಳರ ಕೃತ್ಯದಿಂದಾಗಿ ಬ್ಯಾಂಕಿಗೆ ಬೆಂಕಿ ತಗುಲಿದ್ದು, ಸುಮಾರು 2,10,000 ರೂ. ಮೌಲ್ಯದ ಸ್ವತ್ತುಗಳು ಲುಕ್ಸಾನುಗೊಂಡಿವೆ.
ಅವಘಡದಲ್ಲಿ ಮೂರು ಹೆಚ್.ಪಿ ಕಂಪನಿಯ ಕಂಪ್ಯೂಟರ್‌ಗಳು , ಎರಡು ಪ್ರಿಂಟರ್‌ಗಳು , ಎರಡು ಕ್ಯಾಶ್ ಕೌಂಟಿಂಗ್ ಮಷಿನ್‌ಗಳು ಹಾಗೂ ಒಂದು ಸ್ಕ್ಯಾನರ್ ಸೇರಿದಂತೆ ಒಟ್ಟು 2,10,000 ರೂಪಾಯಿ ಮೌಲ್ಯದ ವಸ್ತುಗಳು ಅಗ್ನಿಯಲ್ಲಿ ನಾಶವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನಾ ಸ್ಥಳಕ್ಕೆ ಯಲ್ಲಾಪುರ ಠಾಣೆಯ ಪಿ.ಐ. ರಮೇಶ ಹನಾಪುರ ಹಾಗೂ ಪಿ.ಎಸ್.ಐ. ಮಹಾವೀರ ಕಾಂಬ್ಳೆ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅನಾಮಧೇಯ ಕಳ್ಳರ ಪತ್ತೆಗಾಗಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.