ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಕರ್ನಾಟಕ ಬ್ಯಾಂಕ್ ಸಿದ್ದಾಪುರ ಶಾಖೆಯಲ್ಲಿ ₹3.51 ಕೋಟಿ ಮಹಾ ವಂಚನೆ

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
ಸಿದ್ದಾಪುರ: ಪಟ್ಟಣದ ಕರ್ನಾಟಕ ಬ್ಯಾಂಕ್ ಶಾಖೆಯಲ್ಲಿ ಗ್ರಾಹಕರ ಹಣವನ್ನು ಅಕ್ರಮವಾಗಿ ವೈಯಕ್ತಿಕ ಖಾತೆಗೆ ವರ್ಗಾಯಿಸುವ ಮೂಲಕ ಬರೋಬ್ಬರಿ ₹3,51,84,349 (ಮೂರು ಕೋಟಿ ಐವತ್ತೊಂದು ಲಕ್ಷಕ್ಕೂ ಅಧಿಕ) ವಂಚನೆ ನಡೆದಿರುವುದು ದೃಢಪಟ್ಟಿದ್ದು, ಬ್ಯಾಂಕ್‌ನ ಗ್ರಾಹಕ ಸೇವಾ ಸಹಾಯಕ ಸಿಬ್ಬಂದಿ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬ್ಯಾಂಕಿನ ಆಂತರಿಕ ತನಿಖೆ ಮುಗಿದ ನಂತರ, ಶಾಖಾ ಪ್ರಬಂಧಕರಾದ ಶ್ರೀ ಶಂಭುಲಿಂಗ ಪರಮೇಶ್ವರ ಭಟ್ ಅವರು ಶುಕ್ರವಾರ ಪೊಲೀಸ್ ಠಾಣೆಗೆ ಹಾಜರಾಗಿ, ಶಾಖೆಯ ಸಿಬ್ಬಂದಿ ಮಂಜುನಾಥ ಶ್ರೀಧರ ಭಟ್ (34) ವಿರುದ್ಧ ದೂರು ನೀಡಿದ್ದಾರೆ. ವಂಚನೆಯ ಪ್ರಮಾಣ ದೊಡ್ಡದಿರುವ ಕಾರಣ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಲಾಗಿದೆ.

ವಂಚನೆಯ ಸಂಪೂರ್ಣ ವಿವರ:

ದೂರಿನ ಪ್ರಕಾರ, ಆಪಾದಿತ ಮಂಜುನಾಥ ಭಟ್ 2013ರಲ್ಲಿ ಬ್ಯಾಂಕ್ ಸೇರಿದ್ದು, 2023ರಿಂದ ಸಿದ್ದಾಪುರ ಶಾಖೆಯಲ್ಲಿ ಗ್ರಾಹಕ ಸೇವಾ ಸಹಾಯಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ.

 ಸಿಬ್ಬಂದಿಯು ದಿನಾಂಕ 11-09-2024 ರಿಂದ 23-09-2025ರ ಅವಧಿಯಲ್ಲಿ ಹಂತ ಹಂತವಾಗಿ ಗ್ರಾಹಕರ ಖಾತೆಗಳಿಂದ ಹಣವನ್ನು ಅಕ್ರಮವಾಗಿ ವರ್ಗಾಯಿಸಿಕೊಂಡಿದ್ದಾನೆ.

 ಹಣಕಾಸು ವರ್ಷ 2024-25 ರಲ್ಲಿ ₹1.83 ಕೋಟಿ ಹಾಗೂ 2025-26 ರಲ್ಲಿ ₹1.68 ಕೋಟಿ ಸೇರಿದಂತೆ ಒಟ್ಟು ₹3.51 ಕೋಟಿಗೂ ಅಧಿಕ ಮೊತ್ತವನ್ನು ವರ್ಗಾಯಿಸಿರುವುದು ಪತ್ತೆಯಾಗಿದೆ.

 ಬಯಲಾದ ಬಗೆ: ದಿನಾಂಕ 29.09.2025 ರಂದು ಗ್ರಾಹಕರೊಬ್ಬರು ತಮ್ಮ ಟರ್ಮ್ ಡೆಪಾಸಿಟ್ (TD) ನವೀಕರಣಕ್ಕೆ ಅರ್ಜಿ ಸಲ್ಲಿಸಿದಾಗ ವಂಚನೆ ಬಯಲಾಗಿದೆ. ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ಆ ಠೇವಣಿಯನ್ನು 24.09.2024 ರಂದೇ ಮುಚ್ಚಿ, ಹಣವನ್ನು ಗ್ರಾಹಕರ ಉಳಿತಾಯ ಖಾತೆಗೆ ಜಮಾ ಮಾಡಿರುವುದು ಕಂಡುಬಂದಿದೆ. ಆದರೆ, ಆ ಮೊತ್ತದ ₹4,40,500 ಅನ್ನು ಆರೋಪಿತ ಸಿಬ್ಬಂದಿ ಅಧಿಕಾರಿಗಳ ಲಾಗಿನ್ ಬಳಸಿ, ಆರ್.ಟಿ.ಜಿ.ಎಸ್. (RTGS) ಮೂಲಕ ತನ್ನ ಬೇರೆ ಬ್ಯಾಂಕಿನ ವೈಯಕ್ತಿಕ ಖಾತೆಗೆ ವರ್ಗಾಯಿಸಿಕೊಂಡಿರುವುದು ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.

 ಮೋಸದ ತಂತ್ರ: ಬ್ಯಾಂಕಿನ ಸಿಬ್ಬಂದಿಯಾಗಿದ್ದ ಮಂಜುನಾಥ ಭಟ್ ಗ್ರಾಹಕರ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು, ಅವರ ಠೇವಣಿಗಳನ್ನು ಮುಂಚಿತವಾಗಿ ಮುಚ್ಚಿ, ಎಸ್.ಎಂ.ಎಸ್ ಅಲರ್ಟ್ ಸೇವೆಗಳನ್ನು ತೆಗೆದುಹಾಕಿ, ನಕಲಿ ಠೇವಣಿ ರಸೀದಿಗಳನ್ನು ಮುದ್ರಿಸಿ ಗ್ರಾಹಕರಿಗೆ ನೀಡಿದ್ದಾನೆ. ಮುಖ್ಯವಾಗಿ ಹಿರಿಯ ನಾಗರಿಕರು ಮತ್ತು ಪರಿಚಿತ ಗ್ರಾಹಕರನ್ನೇ ಗುರಿಯಾಗಿಸಿಕೊಂಡು ಈ ವಂಚನೆ ಎಸಗಿದ್ದಾನೆ.

ಬ್ಯಾಂಕ್‌ನಿಂದ ಸ್ಪಷ್ಟನೆ ಹಾಗೂ ಕ್ರಮಗಳು
ಘಟನೆಗೆ ಸಂಬಂಧಿಸಿದಂತೆ ಬ್ಯಾಂಕಿನ ಉಪ ಮಹಾ ಪ್ರಬಂಧಕ ವಾದಿರಾಜ್ ಭಟ್ ಕೆ. ಅವರು ಈ ಕೆಳಗಿನಂತೆ ಸ್ಪಷ್ಟನೆಯನ್ನು ಸ್ಥಳಿಯ ಪತ್ರಿಕೆಯೊಂದು ಈ ರೀತಿ ವರದಿ ಮಾಡಿದೆ:

ಆರೋಪಿ ಅಮಾನತು: "ಆಂತರಿಕ ತನಿಖೆ ಜಾರಿಯಲ್ಲಿದ್ದು, ಸಂಬಂಧಪಟ್ಟ ಉದ್ಯೋಗಿಯನ್ನು ತಕ್ಷಣವೇ ಅಮಾನತುಗೊಳಿಸಲಾಗಿದೆ. ಇವರೊಂದಿಗೆ ಇತರ ಸಿಬ್ಬಂದಿ ಪಾತ್ರವಿದ್ದರೆ, ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದು."

ಗ್ರಾಹಕರಿಗೆ ಭರವಸೆ: "ಗ್ರಾಹಕರ ಹಣಕ್ಕೆ ಯಾವುದೇ ಧಕ್ಕೆ ಉಂಟಾಗದಂತೆ ಬ್ಯಾಂಕ್ ಕ್ರಮ ಕೈಗೊಳ್ಳುತ್ತಿದೆ. ಗ್ರಾಹಕರು ಗಾಬರಿಪಡಬೇಕಾಗಿಲ್ಲ. ಬ್ಯಾಂಕ್ ಸದೃಢವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಲಾಗುವುದು."

ಹಣ ಮರುಪೂರಣಕ್ಕೆ ಪ್ರಕ್ರಿಯೆ: "ಹಣ ಕಳೆದುಕೊಂಡ ಗ್ರಾಹಕರಿಗೆ ಮರುಪೂರಣ ಮಾಡಲು ಆಡಳಿತ ಮಂಡಳಿಯ ಅನುಮೋದನೆ ಅಗತ್ಯವಿದ್ದು, ಇದಕ್ಕೆ 1 ರಿಂದ 15 ದಿನಗಳ ಕಾಲಾವಕಾಶ ಬೇಕು. ಅನುಮತಿ ದೊರೆತ ತಕ್ಷಣ ಹಣ ಮರುಪಾವತಿ ಅಥವಾ ಠೇವಣಿ ನವೀಕರಣದ ಪ್ರಮಾಣ ಪತ್ರವನ್ನು ನೀಡಲಾಗುತ್ತದೆ."

ಕರ್ತವ್ಯ ಲೋಪ:
ಅವ್ಯವಹಾರಕ್ಕೆ ಬಳಕೆಯಾದ ಲಾಗಿನ್ ಹೊಂದಿದ್ದ ಇಬ್ಬರು ಸಿಬ್ಬಂದಿಯನ್ನು ಈಗಾಗಲೇ ಬೇರೆ ಶಾಖೆಗೆ ವರ್ಗಾಯಿಸಲಾಗಿದೆ ಎಂದು ಬ್ಯಾಂಕ್‌ನ ಆಂತರಿಕ ಮೂಲಗಳು ತಿಳಿಸಿವೆ. "ಇತರರೊಂದಿಗೆ ತಮ್ಮ ಲಾಗಿನ್ ಬಹಿರಂಗಪಡಿಸಿದ್ದು ಗಂಭೀರವಾದ ಕರ್ತವ್ಯ ಲೋಪವಾಗಿದೆ. ಇವರ ಮೇಲೂ ಮುಂದಿನ ಹಂತದ ತನಿಖೆ ಮುಂದುವರೆದಿದೆ" ಎಂದು ಮೂಲಗಳು ಹೇಳಿವೆ.
ಸಿದ್ದಾಪುರದ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಚುರುಕುಗೊಳಿಸಿದ್ದಾರೆ.

©ತತ್ವನಿಷ್ಠ ಸಿದ್ದಾಪುರ
PGK

Post a Comment

Previous Post Next Post