*ಕಾರವಾರ*:ಅಕ್ಟೋಬರ್ 27ರಂದು ಸೋಮವಾರ ರಾತ್ರಿ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿ ಚೆಕ್‌ಪೋಸ್ಟ್ ಬಳಿ ಗೋವಾದಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್‌ನಲ್ಲಿ ₹1 ಕೋಟಿ ಮೌಲ್ಯದ ನಗದು ವಶಪಡಿಸಿಕೊಳ್ಳಲಾಗಿದೆ. ಚಿತ್ತಾಕುಲ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಘಟನೆಯು ಸೋಮವಾರ ರಾತ್ರಿ ನಡೆದಿದೆ. ಗೋವಾ-ಕಾರವಾರ ಗಡಿ ಪ್ರದೇಶದ ಮಾಜಾಳಿ ಚೆಕ್‌ಪೋಸ್ಟ್‌ನಲ್ಲಿ ವಾಹನ ತಪಾಸಣೆಯ ಸಂದರ್ಭದಲ್ಲಿ ಈ ನಗದು ಪತ್ತೆಯಾಗಿದೆ.
ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಕಲ್ಪೇಶ್ (ವಯಸ್ಸು 32, ಬೆಂಗಳೂರು) ಮತ್ತು ಬಮರ್ ರಾಮ್ (ವಯಸ್ಸು 28, ರಾಜಸ್ಥಾನ ಮೂಲದವರು) ಎಂಬ ಇಬ್ಬರು ವ್ಯಕ್ತಿಗಳ ಬಳಿ ದೊಡ್ಡ ಚೀಲದಲ್ಲಿ ₹500 ಮತ್ತು ₹200 ಮುಖಬೆಲೆಯ ನೋಟುಗಳ ರಾಶಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಒಟ್ಟು ₹1,00,00,000 (ಒಂದು ಕೋಟಿ ರೂಪಾಯಿ) ಮೊತ್ತದ ನಗದು ವಶಪಡಿಸಿಕೊಳ್ಳಲಾಗಿದೆ.
“ಹಣದ ಮೂಲ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ಆರೋಪಿಗಳು ಹಾಜರುಪಡಿಸಿಲ್ಲ ಎನ್ನಲಾಗಿದೆ. ವಶ ಪಡಿಸಿಕೊಂಡ ಹಣ ಹವಾಲಾ ಅಥವಾ ರಾಜಕೀಯ ಉದ್ದೇಶಗಳಿಗೆ ಬಳಕೆಗೆ ಸಂಬಂಧಪಟ್ಟಿರಬಹುದೆಂದು ಶoಕಿಸಲಾಗಿದೆ. ಈ ನಡುವೆ ತೆರಿಗೆ ವಂಚಿಸಿದ ಹಣ ಎಂದೂ ಕೇಳಿಬರುತ್ತಿದೆ. ಕಾರವಾರದ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರೆದಿದೆ.