*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಗುಡ್ಡದಮಾದಾಪುರ ಗ್ರಾಮಸ್ಥರು ಇಲ್ಲಿನ ಮೂರು ಸಾವಿರ ಎಕರೆಯಲ್ಲಿನ ಅರಣ್ಯವನ್ನು ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮಸ್ಥರು ಅರಣ್ಯ ಇಲಾಖೆಯ ಸಹಕಾರದಿಂದ 2002ರಲ್ಲಿ ಶಿದ್ದೇಶ್ವರ ಗ್ರಾಮ ಅರಣ್ಯ ಸಮಿತಿ ರಚಿಸಿಕೊಂಡಿದ್ದಾರೆ. ಗ್ರಾಮ ಸಮಿತಿಯ ಅಧ್ಯಕ್ಷ ಕರಿಬಸಪ್ಪ ಕಾಗಿನೆಲೆ ತಮ್ಮ ಜೀವನವನ್ನೇ ಕಾಡು ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ.
ಬರದಿಂದ ಗ್ರಾಮಸ್ಥರಿಗೆ ಇನ್ನಿಲ್ಲದ ಸಂಕಷ್ಟ: ಈ ಕಾಡನ್ನು ಸಂಪರ್ಕಿಸುವ ಗ್ರಾಮಗಳ ಜನರಿಗೆ ಕಾಡುಗಳ ಕುರಿತಂತೆ ಜಾಗೃತಿ ಮೂಡಿಸಿದ್ದಾರೆ. ಗ್ರಾಮಸ್ಥರ ಈ ಸಾಧನೆಯ ಹಿಂದೆ ಒಂದು ವ್ಯಥೆಯೂ ಇದೆ. ಸುಮಾರು ಅರ್ಧ ಶತಮಾನದ ಹಿಂದೆ ಗುಡ್ಡದಮಾದಾಪುರ ಗ್ರಾಮ ಅರಣ್ಯದಿಂದ ಸುತ್ತುವರೆದಿತ್ತು. ತೇಗ, ಹೊನ್ನೆ, ಬೀಟೆ, ಶ್ರೀಗಂಧ, ಬೇವು, ಮಾವು ಮರಗಳನ್ನು ಹೊಂದಿತ್ತು. ಆದರೆ, 1976ರಲ್ಲಿ ಗ್ರಾಮಕ್ಕೆ ಕಾಣಿಸಿಕೊಂಡ ಬರ, ಗ್ರಾಮಸ್ಥರಿಗೆ ಇನ್ನಿಲ್ಲದ ಸಂಕಷ್ಟ ತಂದಿತು.
ಗುಡ್ಡದಮಾದಾಪುರ ಸೇರಿದಂತೆ ಸುತ್ತಮುತ್ತಲ ಗ್ರಾಮಸ್ಥರು ದಟ್ಟ ಅರಣ್ಯವನ್ನು ಕಡಿದು ಕಟ್ಟಿಗೆ ಮಾಡಿ ಜೀವನ ಸಾಗಿಸುತ್ತಿದ್ದರು. ಅದರೊಂದಿಗೆ ಶತಶತಮಾನಗಳಿಂದ ಇದ್ದ ಅರಣ್ಯ ಜನರ ದುರಾಸೆಗೆ ಬಲಿಯಾಯಿತು. ಅದರ ಜೊತೆಗೆ, ಗ್ರಾಮದ ಅಂತರ್ಜಲ ಮಟ್ಟವೂ ಕುಸಿಯಿತು. ನಂತರ ಜನರು ಗ್ರಾಮ ತೊರೆದು ದೂರ ದೂರದ ನಗರಗಳಿಗೆ ವಲಸೆ ಹೋಗಲು ಆರಂಭಿಸಿದರು.
ಇದೇ ರೀತಿ ಮುಂದುವರೆದರೆ ಗ್ರಾಮದಲ್ಲಿ ಜನರೇ ಇಲ್ಲದಂತಾಗುತ್ತದೆ ಎಂಬ ಆತಂಕ ಕರಿಬಸಪ್ಪ ಕಾಗಿನೆಲೆ ಅವರನ್ನು ಕಾಡಲಾರಂಭಿಸಿತು. ಆ ಸಂದರ್ಭದಲ್ಲಿ ಅವರಿಗೆ ಹೊಳೆದದ್ದೇ ಈ ಶಿದ್ದೇಶ್ವರ ಗ್ರಾಮ ಅರಣ್ಯ ಸಮಿತಿ ರಚನೆ. ನಂತರ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಅರಣ್ಯ ರಕ್ಷಣೆಗೆ ಕರಿಬಸಪ್ಪ ಕಾಗಿನೆಲೆ ಮುಂದಾದರು.
ಸ್ಥಳೀಯವಾಗಿ ಕರಡಿಕೊಳ್ಳ ಎನಿಸಿಕೊಂಡಿದ್ದ ಅರಣ್ಯ ಸಂರಕ್ಷಣೆಗೆ ಕರಿಬಸಪ್ಪ ಮುಂದಾದರು. ಆರಂಭದಲ್ಲಿ ಗುಡ್ಡದಮಾದಾಪುರ, ಸುತ್ತಮುತ್ತಲ ಗ್ರಾಮಗಳ ಜನರ ವಿರೋಧ ಹೊಡೆದಾಡುವ ಮಟ್ಟಿಗೆ ಹೋಯಿತು. ಆದರೆ, ವಿಚಲಿತರಾಗದ ಕರಬಸಪ್ಪ ಗುಡ್ಡದಮಾದಾಪುರ ಜನರ ಮನವೊಲಿಸಿದರು.
ಅರಣ್ಯದ ಮಹತ್ವ, ಪರಿಸರ ಸಮತೋಲನ, ಗ್ರಾಮದ ಏಳಿಗೆ, ಅಂತರ್ಜಲ ಮಟ್ಟ ಸುಧಾರಣೆ ಕುರಿತಂತೆ ಗ್ರಾಮಸ್ಥರಿಗೆ ತಿಳಿಹೇಳಿದರು. ಆರಂಭದಲ್ಲಿ ಗಿಡ ಕತ್ತರಿಸಲು ಅರಣ್ಯಕ್ಕೆ ಹೋಗುತ್ತಿದ್ದ ಗ್ರಾಮಸ್ಥರೇ ಬೇರೆಯವರು ಗಿಡ ಕಡಿಯದಂತೆ ನೋಡಿಕೊಳ್ಳುವಂತಾದರು.
ಇದರ ಜೊತೆಗೆ, ಅರಣ್ಯದ ಸಮೀಪದ ಗ್ರಾಮಗಳಿಗೆ ತೆರಳಿದ ಕರಿಬಸಪ್ಪ ಅವರಲ್ಲೂ ಸಹ ಅರಣ್ಯದ ಕುರಿತಂತೆ ಜಾಗೃತಿ ಮೂಡಿಸಿದರು. ಅಲ್ಲದೆ, ಗುಡ್ಡದಮಾದಾಪುರದ ಸುಮಾರು ಮೂರು ಸಾವಿರ ಎಕರೆ ಪ್ರದೇಶದ ಅರಣ್ಯ ಮುಟ್ಟದಂತೆ ಮನವಿ ಮಾಡಿದರು.
ಪರಿಣಾಮ, ಇದೀಗ ಮೂರುಸಾವಿರ ಎಕರೆಯಲ್ಲಿ ಕೋಟ್ಯಂತರ ಮರಗಳು ಹಸಿರು ಹೊದ್ದು ನಿಂತಿವೆ. ಅರಣ್ಯದಲ್ಲಿ ಎಲ್ಲೇ ಮರ ಕಡಿಯುವ ಸಪ್ಪಳವಾದರೆ ಸಾಕು, ಕರಿಬಸಪ್ಪ ಅಲ್ಲಿ ಹಾಜರಿರುತ್ತಾರೆ. ಪ್ರಾಣಿಗಳ ಬೇಟೆಗಾರರಿಗೆ ತಕ್ಕಶಾಸ್ತಿ ಮಾಡುತ್ತಾರೆ. ಗಿಡ ಕಡಿದವರಿಗೆ ದಂಡ ಹಾಕುತ್ತಾರೆ. ಆ ಹಣವನ್ನು ಕಾಡಿನ ರಕ್ಷಣೆಗೆ ಬಳಸುತ್ತಾರೆ.
ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡರಂತೂ ಕರಿಬಸಪ್ಪ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಾರೆ. ಅರವತ್ತರ ಅಸುಪಾಸಿನಲ್ಲಿರುವ ಇವರು ಯುವಕರನ್ನು ನಾಚಿಸುವಂತೆ ಕೆಲಸ ಮಾಡುತ್ತಾರೆ. ಇವರು ರಕ್ಷಿಸಿದ ಅರಣ್ಯದಲ್ಲಿ ಇದೀಗ 86 ತಳಿಯ ವೈವಿದ್ಯಮಯ ಗಿಡಗಳು ಬೆಳೆದು ಮರಗಳಾಗುತ್ತಿವೆ.
ಹಿಂದೆ ಇದ್ದ ವೈಭವವನ್ನು ಗುಡ್ಡದಮಾದಾಪುರ ಗ್ರಾಮ ಮರಳಿ ಪಡೆದಿದೆ. ಗ್ರಾಮದ ಸುತ್ತ ಇರುವ ಅರಣ್ಯದಲ್ಲಿ ಕಾಡುಪ್ರಾಣಿಗಳು ಕಾಣಿಸಿಕೊಳ್ಳಲಾರಂಭಿಸಿವೆ. ಎತ್ತ ನೋಡಿದರತ್ತ ಹಸಿರು ಕಂಗೊಳಿಸುತ್ತಿದೆ. ಕರಿಬಸಪ್ಪ ಅವರ 11 ಜನರ ಕಾರ್ಯಕಾರಿ ಸಮಿತಿ ಸದಸ್ಯರು ಅರಣ್ಯದಲ್ಲಿ ಪಾದರಸದಂತೆ ಸಂಚರಿಸುತ್ತಾರೆ.
ಹಸಿರುಹೊತ್ತು ನಿಂತಿರುವ 86 ತಳಿಯ ಗಿಡಗಳು: ಶಿದ್ದೇಶ್ವರ ಗ್ರಾಮ ಅರಣ್ಯ ಸಮಿತಿಗೆ ರಾಣೆಬೆನ್ನೂರಿನ ವನಸಿರಿ ಗ್ರಾಮೀಣಾಭಿವೃದ್ದಿ ಸೊಸೈಟಿ ಮಾರ್ಗದರ್ಶನ ನೀಡುತ್ತಾ ಬಂದಿದೆ. ಸಮಿತಿಯ ಕಾರ್ಯದ ಹಿಂದೆ ವನಸಿರಿ ಸೊಸೈಟಿಯ ಶ್ರಮ ಸಾಕಷ್ಟು ಕೆಲಸ ಮಾಡಿದೆ. ಮೂರುಸಾವಿರ ಎಕರೆಯಲ್ಲಿ ಬೇವು, ನೇರಲೆ, ಬೆಟ್ಟದ ನೆಲ್ಲಿಕಾಯಿ, ಶ್ರೀಗಂಧದ ಮರಗಳು, ಮತ್ತಿ, ದಿಂಡಿಲು, ಬುರುಗ ಮತ್ತು ಆಲ ಸೇರಿದಂತೆ 86 ತಳಿಯ ಗಿಡಗಳು ಹಸಿರುಹೊದ್ದಿವೆ.
ಕರಿಬಸಪ್ಪ ಒಂದು ಕಡೆ ಅರಣ್ಯ ಸಂರಕ್ಷಣೆಗೆ ನಿಂತರೆ, ಮತ್ತೊಂದು ಕಡೆ ಗ್ರಾಮಸ್ಥರಿಗೆ ಕಟ್ಟಿಗೆ ಬದಲು ಅಡುಗೆ ಅನಿಲದ ಬಳಕೆಯ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ತಾವೇ ಮನೆ ಮನೆಗೆ ತೆರಳಿ ಅಡುಗೆ ಅನಿಲದ ಸಿಲಿಂಡರ್, ಸ್ಟೌ ನೀಡಿ, ಸೌದೆ ಬದಲು ಅಡುಗೆ ಅನಿಲ ಬಳಕೆ ಬಗ್ಗೆ ತಿಳಿಸಿಕೊಟ್ಟಿದ್ದಾರೆ.
22 ವರ್ಷಗಳಿಂದಲೂ ಕಾಡನ್ನು ರಕ್ಷಣೆ ಮಾಡಿಕೊಂಡು ಬರುತ್ತಿದ್ದೇನೆ. ಅರಣ್ಯ ಇಲಾಖೆಯವರು ಸಹಾಯ ಮಾಡಿದ್ರು. ಅರಣ್ಯದ ಸುತ್ತ ಕಾವಲು ಹಾಕಿ ರಕ್ಷಣೆ ಮಾಡಿಕೊಂಡು ಬಂದೆವು. 2004ರಲ್ಲಿ ಸಿಲಿಂಡರ್ ಸಿಕ್ಕಿದ್ದರಿಂದ ಮರಗಳನ್ನು ಕಡಿಯುವುದು ಕಡಿಮೆಯಾಗುತ್ತಾ ಬಂತು.ಈ ಅರಣ್ಯ ಸಮಿತಿ ರಾಜ್ಯ ಸೇರಿದಂತೆ ದೇಶಕ್ಕೆ ಮಾದರಿಯಾಗಿದೆ. ಉಳಿದ ಗ್ರಾಮಗಳು ಈ ರೀತಿಯ ಸಾಧನೆ ಮಾಡಿದರೆ, ದೇಶ ಸಾಕಷ್ಟು ಸುಧಾರಿಸುತ್ತೆ. ಪ್ರತಿಶತ 33 ರಷ್ಟು ಅರಣ್ಯ ಹೊಂದುವ ಗುರಿಸಾಧಿಸಲು ಸಾಧ್ಯವಾಗುತ್ತೆ" ಎನ್ನುತ್ತಾರೆ ಕರಿಬಸಪ್ಪ.
ವನಸಿರಿ ಸಂಸ್ಥೆ ಮುಖ್ಯಸ್ಥ ಎಸ್.ಬಿ.ಬಳಿಗಾರ ಅವರು ಮಾತನಾಡಿದ್ದು, "ಸಮುದಾಯದ ಸಹಭಾಗಿತ್ವ ಮಹತ್ತರವಾದದ್ದು, ಅರಣ್ಯ ಇಲಾಖೆ ಜೊತೆ ಗ್ರಾಮಸ್ಥರು ಸೇರಿ ಕಾರ್ಯ ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಎನ್ನುವುದಕ್ಕೆ ಗುಡ್ಡದಮಾದಾಪುರ ಗ್ರಾಮವೇ ಮಾದರಿ" ಎಂದು ಹೇಳಿದ್ದಾರೆ.
ಪರಿಸರದ ಬಗ್ಗೆ ಕಾಳಜಿ ಬರಬೇಕು:ಗ್ರಾಮಸ್ಥ ಮಹಾದೇವಪ್ಪ ಕಾಗಿನೆಲೆ ಮಾತನಾಡಿ, "ಅರಣ್ಯದ ಬಗ್ಗೆ ಪ್ರಸ್ತುತ ಯುವ ಜನಾಂಗಕ್ಕೆ ಹೆಚ್ಚು ಅರಿವು ಮೂಡಿಸುವ ಅನಿವಾರ್ಯತೆ ಇದೆ. ಮನುಷ್ಯರಿಗೆ ಕಾಡು ಯಾವ ಯಾವ ರೀತಿಯಲ್ಲಿ ಉಪಯೋಗವಾಗುತ್ತೆ ಎಂಬುದರ ಕುರಿತು ಹಾಗೂ ಕಾಡಿನ ಮಹತ್ವ ಕುರಿತಂತೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಬೇಕು. ಕೇವಲ ಸ್ಲೋಗನ್‌ಗಳ ಘೋಷಣೆಯಿಂದ ಕಾಡು ಉಳಿಯುವುದಿಲ್ಲ, ಬೆಳೆಯುವುದಿಲ್ಲ. ಅದರ ಬೆಳವಣಿಗೆ, ರಕ್ಷಣೆಗೆ ಏನು ಮಾಡಬೇಕು ಎನ್ನುವುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಪ್ರತಿಯೊಬ್ಬರಲ್ಲಿಯೂ ಅರಣ್ಯ ಸಂರಕ್ಷಣೆ, ಪರಿಸರದ ಬಗ್ಗೆ ಕಾಳಜಿ ಬರಬೇಕು. ಆಗ ಮಾತ್ರ ಅರಣ್ಯ ಉಳಿಯುತ್ತೆ. ಕಾಡು ಪ್ರಾಣಿಗಳು ಉಳಿದರೆ ನಾಡು ಪ್ರಾಣಿಯಾದ ಮನುಷ್ಯ ನೆಮ್ಮದಿಯಿಂದ ಇರಲು ಸಾಧ್ಯ" ಎಂದು ತಿಳಿಸಿದ್ದಾರೆ.