*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*101 ಮರಗಳ ನೆಲಸಮ.. ಪ್ರತಿಷ್ಠಿತ ಎಂಬೆಸಿ ಗ್ರೂಪ್​​ ವಿರುದ್ಧ FIR ದಾಖಲು.

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
ಬೆಂಗಳೂರು: ಅಭಿವೃದ್ಧಿಯ ಹೆಸರಿನಲ್ಲಿ ಮರಗಳ ಮಾರಣ ಹೋಮ ಮುಂದುವರಿದಿದ್ದು, ಐಟಿ ಹಬ್ ಖ್ಯಾತಿಯ ಕಾಡುಗೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಬೃಹತ್ ಪ್ರಮಾಣದಲ್ಲಿ ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಪ್ರತಿಷ್ಠಿತ ಎಂಬೆಸ್ಸಿ ಈಸ್ಟ್ ಬ್ಯುಸಿನೆಸ್ ಪಾರ್ಕ್ ಪ್ರೈವೇಟ್ ಲಿಮಿಟೆಡ್ (Embassy east business park private limited) ವಿರುದ್ಧ ಅರಣ್ಯ ಇಲಾಖೆ ಎಫ್‌ಐಆರ್
ಘಟನೆಯ ಹಿನ್ನೆಲೆ:
ಕೆ.ಆರ್. ಪುರಂ ಮತ್ತು ಬಿದರಹಳ್ಳಿ ಹೋಬಳಿಯ ಕಾಡುಗೋಡಿ ಸರ್ವೆ ನಂಬರ್ 1ರಲ್ಲಿ ಬರುವ ಮೀಸಲು ಅರಣ್ಯ ಪ್ರದೇಶದಲ್ಲಿ ಈ ಕೃತ್ಯ ನಡೆದಿದೆ ಎನ್ನಲಾಗಿದೆ. ಎಂಬೆಸ್ಸಿ ಈಸ್ಟ್ ಬ್ಯುಸಿನೆಸ್ ಪಾರ್ಕ್ ತನ್ನ ಸ್ವಾರ್ಥಕ್ಕಾಗಿ ಯಾವುದೇ ಪೂರ್ವಾನುಮತಿ ಇಲ್ಲದೆ 101 ಮರಗಳನ್ನು ಕಡಿದು ಹಾಕಿದೆ ಎಂಬ ಗಂಭೀರ ಆರೋಪವನ್ನ ಮಾಡಲಾಗಿದೆ. 
ನಿಯಮಗಳ ಉಲ್ಲಂಘನೆ
ವರದಿಗಳ ಪ್ರಕಾರ, ಫೆಬ್ರವರಿ 2020 ರಲ್ಲಿ ಅಂದಿನ ಬಿಬಿಎಂಪಿ ಅರಣ್ಯ ವಿಭಾಗದಿಂದ ಕೇವಲ 42 ಮರಗಳನ್ನು ಕಡಿಯಲು ಈ ಸಂಸ್ಥೆ ಅನುಮತಿ ಪಡೆದಿತ್ತು. ಈ ಅನುಮತಿಯನ್ನು ಮೀರಿ ಒಟ್ಟು 101 ಮರಗಳಿಗೆ ಕೊಡಲಿ ಏಟು ಹಾಕಲಾಗಿದೆ. ಅಷ್ಟೇ ಅಲ್ಲದೆ, ಕತ್ತರಿಸಿದ ಮರಗಳನ್ನು ಬೇರೆಡೆಗೆ ಸಾಗಿಸಲು ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೆ ಅಕ್ರಮವಾಗಿ ಕಳ್ಳ ಸಾಗಾಣಿಕೆ ಮಾಡಲಾಗಿದೆ ಎಂದು ದೂರಲಾಗಿದೆ.

ಕಾನೂನು ಕ್ರಮ
ಈ ಅಕ್ರಮದ ಕುರಿತು ಜಿಬಿಎ (Green Belt Area) ಅರಣ್ಯ ಇಲಾಖೆ ಅಧಿಕಾರಿಗಳು ಈಗ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ 1976, ಕಲಂ 8(1)ರ ಅಡಿ ನಿಯಮಗಳ ಉಲ್ಲಂಘನೆಯ ಹಿನ್ನೆಲೆಯಲ್ಲಿ ಎಂಬಸ್ಸಿ ಸಂಸ್ಥೆಯ ವಿರುದ್ಧ ಎಫ್‌ಐಆರ್ (FIR) ದಾಖಲಿಸಲಾಗಿದೆ. ಜೊತೆಗೆ ಅರಣ್ಯಾಧಿಕಾರಿಗಳು ಸಂಸ್ಥೆಗೆ ನೋಟಿಸ್ ಜಾರಿ ಮಾಡಿದ್ದಾರೆ.
ಇದು ಎರಡನೇ ಎಫ್‌ಐಆರ್
ಕಾಡುಗೋಡಿ ಮೀಸಲು ಅರಣ್ಯ ಪ್ರದೇಶದಲ್ಲಿ ಮರಗಳ ಮಾರಣ ಹೋಮಕ್ಕೆ ಸಂಬಂಧಿಸಿದಂತೆ ಇದು ಎರಡನೇ ಎಫ್‌ಐಆರ್ ಆಗಿದೆ. ಈ ಹಿಂದೆ 2007ರಲ್ಲಿ ಕಾನ್ಕಾರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ವಿರುದ್ಧ ಅಕ್ರಮವಾಗಿ ಮರ ಕಡಿದ ಆರೋಪದ ಮೇಲೆ ಮೊದಲ ಪ್ರಕರಣ ದಾಖಲಾಗಿತ್ತು. ಈಗ ಎಂಬಸ್ಸಿ ಸಂಸ್ಥೆಯ ವಿರುದ್ಧ ಎರಡನೇ ಪ್ರಕರಣ ದಾಖಲಾದಂತಾಗಿದೆ.

ಸಂಸ್ಥೆಯ ವಾದವೇನು?
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಎಂಬೆಸ್ಸಿ ಸಂಸ್ಥೆ, ‘ಮರಗಳನ್ನು ಕತ್ತರಿಸಿರುವ ಜಾಗವು ನಮ್ಮದೇ ಸ್ವತ್ತು’ ಎಂದು ಪ್ರತಿಪಾದಿಸಿದೆ. ಅಷ್ಟೇ ಅಲ್ಲದೆ, ಈ ಬಗ್ಗೆ ಸುಪ್ರೀಂಕೋರ್ಟ್‌ನಿಂದ ತಮಗೆ ಪೂರಕವಾದ ಆದೇಶವಿದೆ ಎಂಬ ಮಾಹಿತಿಯನ್ನು ಅರಣ್ಯಾಧಿಕಾರಿಗಳಿಗೆ ನೀಡಿದ್ದಾರೆ. ಸದ್ಯ ಅರಣ್ಯಾಧಿಕಾರಿಗಳು ಸಂಸ್ಥೆ ನೀಡಿರುವ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಮೀಸಲು ಅರಣ್ಯ ಪ್ರದೇಶದ ರಕ್ಷಣೆಯ ದೃಷ್ಟಿಯಿಂದ ಈ ಪ್ರಕರಣ ಈಗ ರಾಜ್ಯದ ಗಮನ ಸೆಳೆದಿದೆ.
ವರದಿ: ಪರಶುರಾಮ್ ಮಾಗಡಿ
PGK

Post a Comment

Previous Post Next Post