*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್ *ಚಾಮರಾಜನಗರದಲ್ಲಿ ಜಿಲ್ಲೆಯಲ್ಲಿ ಕಾಡ್ಗಿಚ್ಚು ಭೀತಿ ; ಅರಣ್ಯ ಇಲಾಖೆಗೆ ಬೇಸಿಗೆ ಸವಾಲು.

 ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್ ನಿಸರ್ಗ ಪುನರ್ ನಿರ್ಮಾಣ ಸಂಸ್ಥೆ ಬಂಡಿಪುರ ಅರಣ್ಯ ಬೆಂಕಿಯಿಂದ ಉಳಿಸಿ ಅಭಿಯಾನ:ಚಾಮರಾಜನಗರ ; ಜಿಲ್ಲೆಯ ಅರಣ್ಯಗಳಲ್ಲಿ ಇದೀಗ ಬೆಂಕಿಯ ಭೀತಿ ಆವರಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗೆ ಕಿಡಿಗೇಡಿಗಳನ್ನು ಕಾಯುವುದೇ ಸವಾಲಾಗಿ ಪರಿಣಮಿಸಿದೆ.
ಬಿರು ಬಿಸಿಲಿಗೆ ಒಣಗಿ ನಿಂತಿರುವ ಅರಣ್ಯವನ್ನು ಬೆಂಕಿಯಿಂದ ರಕ್ಷಣೆ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಯಾವುದೋ ಮೂಲೆಯಲ್ಲಿ ತಿಳಿಗೇಡಿಗಳು ಹಚ್ಚುವ ಬೆಂಕಿಯನ್ನು ತಣಿಸುವುದು ನಿಜಕ್ಕೂ ಸವಾಲೇ ಸರಿ.
ಜಿಲ್ಲೆಯಲ್ಲಿ ಬಂಡೀಪುರ ರಾಷ್ಟ್ರೀಯ ಉದ್ಯಾನ , ಬಿಆರ್‌ಟಿ ಹುಲಿಧಾಮ, ಮಲೆ ಮಹದೇಶ್ವರಬೆಟ್ಟ ಹಾಗೂ ಕಾವೇರಿ ವನ್ಯಧಾಮಗಳು ಸುತ್ತುವರಿದಿವೆ. ಪೂರ್ವ, ಪಶ್ಚಿಮ ಘಟ್ಟಗಳನ್ನು ಸಂದಿಸುವ ಈ ಅರಣ್ಯಗಳ ಸೊಬಗು, ವನ್ಯಜೀವಿ ಸಂಪತ್ತು ಜಿಲ್ಲೆಗೆ ವರದಾನ. ಆದರೆ, ಬೇಸಿಗೆ ಬಂತೆಂದರೆ ಆತಂಕವೂ ತಪ್ಪಿದ್ದಲ್ಲ.
ಯಾವುದೋ ಸಿಟ್ಟು, ಸೆಡೆವು, ಸೇಡಿಗಾಗಿ ಕೆಲವರು ಹಾಕುವ ಬೆಂಕಿ ಒಮ್ಮೊಮ್ಮೆ ಅರಣ್ಯ ಸಿಬ್ಬಂದಿಯ ನಿಯಂತ್ರಣಕ್ಕೆ ಸಿಲುಕುತ್ತದೆ. ಆದರೆ, ಕೆಲವೊಮ್ಮೆ ಇಡೀ ಅರಣ್ಯವನ್ನೇ ಆಹುತಿ ತೆಗೆದುಕೊಳ್ಳುತ್ತದೆ. ಇಂಥ ಬೆಂಕಿಯಿಂದ ಆಗುವ ನಷ್ಟವನ್ನು ಅಳೆಯುವುದು ಹಾಗೂ ಮತ್ತೆ ಅರಣ್ಯವನ್ನು ಆ ಸ್ಥಿತಿಗೆ ತರುವುದು ಸುಲಭದ ವಿಚಾರವಲ್ಲ. ಹಾಗಾಗಿ ಬೇಸಿಗೆಯಲ್ಲಿ ಅರಣ್ಯ ಇಲಾಖೆ ಎಚ್ಚರದಿಂದ ಇರುವುದು ಅಗತ್ಯ.
ಬೈಲೂರಿನಲ್ಲಿ ನಷ್ಟ:
ಬಿಆರ್‌ಟಿ ವನ್ಯಧಾಮದ ಬೈಲೂರು ಪ್ರದೇಶದ ಕೆಲವೆಡೆ ನಾಲ್ಕು ದಿನಗಳ ಹಿಂದೆಯಷ್ಟೇ ಕ್ಷಣಾರ್ಧದಲ್ಲಿ ಬೆಂಕಿ ಆವರಿಸಿತ್ತು. ಆದರೆ, ಅರಣ್ಯ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ, ಅಗ್ನಿಶಾಮಕ ದಳದ ಸಹಕಾರದೊಂದಿಗೆ ಕೆಲ ಗಂಟೆಗಳಲ್ಲೇ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿತು. ಇದರಿಂದ 30ರಿಂದ 35 ಎಕರೆಯಷ್ಟು ಅರಣ್ಯಕ್ಕೆ ಮಾತ್ರ ಬೆಂಕಿ ಸೀಮಿತವಾಯಿತು.
ಸಿಬ್ಬಂದಿಯ ಶ್ರಮ ಇಲ್ಲವಾದರೆ ನೂರಾರು ಎಕರೆ ಅರಣ್ಯ ನಾಶವಾಗುವುದಿತ್ತು. ಹೀಗಾಗಿ ಎಲ್ಲಅರಣ್ಯಗಳಲ್ಲಿ ಬೇಸಿಗೆಯಲ್ಲಿ ಬೆಂಕಿಯ ತುರ್ತು ಕಾರ್ಯಗಳಿಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗುತ್ತದೆ ಎಂಬುದು ಗಮನಾರ್ಹ.
ವರುಣನ ಅಭಯ ಅತ್ಯಗತ್ಯ
ಕಾಡುಗಳಿಗೆ ಬೆಂಕಿಯಿಂದ ರಕ್ಷಣೆಗಾಗಿ ವರುಣನ ಆಗಮನ ಅತ್ಯಗತ್ಯ. ಇದೀಗ ಪೂರ್ವ ಮುಂಗಾರು ಪ್ರಾರಂಭವಾಗಿರುವುದರಿಂದ ಆಗಾಗ ಮಳೆಯಾದರೆ ಅರಣ್ಯಗಳು ನಿಟ್ಟುಸಿರು ಬಿಟ್ಟಂತೆ. ಆದರೆ, ಬಂಡೀಪುರದಲ್ಲಿಒಮ್ಮೆಯಷ್ಟೇ ಮಳೆಯಾಗಿದೆ. ಇನ್ನುಳಿದ ಕಡೆಗಳಲ್ಲಿ ಹೆಚ್ಚಿನ ಮಳೆಯಾಗಿಲ್ಲ. ಇದು ಒಂದು ಬಗೆಯಲ್ಲಿ ಬೆಂಕಿ ಹಾಗೂ ಮತ್ತೊಂದೆಡೆ ವನ್ಯಜೀವಿಗಳಿಗೆ ನೀರಿನ ಕೊರತೆಯನ್ನು ತಂದೊಡ್ಡಲಿದೆ. ಹೀಗಾಗಿ ಅರಣ್ಯ ಇಲಾಖೆಯು ವರುಣನ ಕೃಪೆಯ ನಿರೀಕ್ಷೆಯಲ್ಲಿದೆ.
1100 ಚದರ ಕಿ.ಮೀ ಸುತ್ತಳತೆಯಲ್ಲಿ ಹರಡಿರುವ ಬಂಡೀಪುರ, 625 ಚದರ ಕಿ.ಮೀ. ವ್ಯಾಪ್ತಿಯನ್ನು ಹೊಂದಿರುವ ಬಿಆರ್‌ಟಿ, 906 ಚದರ ಕಿ.ಮೀ. ವಿಸ್ತೀರ್ಣದ ಮಲೆ ಮಹದೇಶ್ವರಬೆಟ್ಟ ಅರಣ್ಯದಲ್ಲಿಸದ್ಯ ಬಿಸಿಲ ತಾಪ ಹೆಚ್ಚಾಗಿದೆ. ನೀರಿನ ಮೂಲಗಳಲ್ಲಿ ಹೆಚ್ಚಿನ ಜಲವಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿಮಳೆ ಕೊರತೆ ಎದುರಾದರೆ ವನ್ಯಜೀವಿಗಳಿಗೂ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದಾಗಿದೆ.
ಹೆಚ್ಚುವರಿ ಸಿಬ್ಬಂದಿ ನೇಮಕ
ಅರಣ್ಯ ಇಲಾಖೆಯು ಬೇಸಿಗೆ ಆರಂಭವಾಗುತ್ತಿದ್ದಂತೆ ತನ್ನ ಅರಣ್ಯದ ವ್ಯಾಪ್ತಿಗೆ ಅನುಗುಣವಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಹೊರ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುತ್ತದೆ. ಬೆಂಕಿ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬೆಂಕಿ ರೇಖೆ ಮಾಡಿಸುವುದು ಹಾಗೂ ಎಲ್ಲಾದರೂ ಬೆಂಕಿ ಕಾಣಿಸಿಕೊಂಡರೆ ತಕ್ಷಣ ಆ ಪ್ರದೇಶದಲ್ಲಿ ಬೆಂಕಿಯನ್ನು ನಿಯಂತ್ರಿಸುವುದು ಈ ಸಿಬ್ಬಂದಿಯ ಕಾಯಕ. ಆಯಾ ಅರಣ್ಯಗಳ ಬಗ್ಗೆ ಮಾಹಿತಿ ಇರುವ ಸ್ಥಳೀಯರನ್ನೇ ಈ ಕಾರ್ಯಕ್ಕೆ ನೇಮಕ ಮಾಡಿಕೊಳ್ಳುವುದು ಸಹ ಈ ಹಿಂದಿನಿಂದಲೂ ನಡೆದಿದೆ. ಹೀಗಾಗಿ ಎಲ್ಲೇ ಬೆಂಕಿ ಹರಡಿದರೂ ಸಿಬ್ಬಂದಿ ತಕ್ಷಣ ಜಾಗೃತರಾಗುತ್ತಾರೆ.



PGK

Post a Comment

Previous Post Next Post