ರಾಜ್ಯದಲ್ಲಿ ಸರ್ಕಾರಿ ಭೂಮಿಯ ವ್ಯವಸ್ಥಿತ ಒತ್ತುವರಿಯು ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಒಟ್ಟು 1,11,098 ಸರ್ಕಾರಿ ಸ್ವತ್ತುಗಳು ಅಕ್ರಮವಾಗಿ ಕಬಳಿಕೆಯಾಗಿವೆ. ಸುಮಾರು 1,95,021.17 ಎಕರೆಯಷ್ಟು ಬೃಹತ್ ವಿಸ್ತೀರ್ಣದ ಜಮೀನು ಪ್ರಭಾವಿಗಳ ಮತ್ತು ಇತರರ ಪಾಲಾಗಿದ್ದು, ಇದರಲ್ಲಿ ಅಮೂಲ್ಯವಾದ ಗೋಮಾಳಗಳು ಹಾಗೂ ಕೆರೆ ಅಂಗಳಗಳು ಸೇರಿವೆ. ಶಕ್ತಿಯುತ ವ್ಯಕ್ತಿಗಳ ಕೈಯಾಗಿರುವ ಈ ಒತ್ತುವರಿಗಳನ್ನು ತೆರವುಗೊಳಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಸಾರ್ವಜನಿಕ ಆಸ್ತಿಯನ್ನು ರಕ್ಷಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ.
ಕರ್ನಾಟಕದಲ್ಲಿ ಒಟ್ಟು 111098 ಸರ್ಕಾರಿ ಭೂಮಿ ಒತ್ತುವರಿ
ಕಬಳಿಕೆಯ ವಿಸ್ತೀರ್ಣ 195021.17 ಎಕರೆಯಾಗಿದೆ
ಬೆಂಗಳೂರು ನಗರದಲ್ಲಿ 34220 ಎಕರೆ 21.13 ಗುಂಟೆ ಒತ್ತುವರಿ
ಬೆಂಗಳೂರು: ರಾಜ್ಯದಲ್ಲಿ ಸರ್ಕಾರಿ ಭೂಮಿಯನ್ನು ವ್ಯವಸ್ಥಿತವಾಗಿ ಒತ್ತುವರಿ ಮಾಡಲಾಗುತ್ತಿದೆ. ಒಟ್ಟು 111098 ಸರ್ಕಾರಿ ಭೂಮಿಗಳು ಒತ್ತುವರಿಯಾಗಿದೆ. ಕಬಳಿಕೆಯ ವಿಸ್ತೀರ್ಣ 195021.17 ಎಕರೆಯಾಗಿದೆ.
ಕೆಲವು ಕಡೆಗಳಲ್ಲಿ ಪ್ರಭಾವಿಗಳು ಸರ್ಕಾರಿ ಜಮೀನು ಕಬಳಿಕೆ ಮಾಡಿಕೊಂಡಿದ್ದಾರೆ. ಇದನ್ನು ತೆರವು ಮಾಡುವುದು ಸವಾಲಾಗಿದೆ. ಗೋಮಾಳ, ಕೆರೆ ಒಳಗೊಂಡು ಸರ್ಕಾರಿ ಜಮೀನು ಅನ್ಯರ ಪಾಲಾಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು?
ಬೆಂಗಳೂರು ನಗರ- 15455
ಬೆಂಗಳೂರು ಗ್ರಾಮಾಂತರ- 529
ಬೆಂಗಳೂರು ದಕ್ಷಿಣ - 1
ಕೋಲಾರ- 1973
ಚಿತ್ರದುರ್ಗ- 14,149
ದಾವಣಗೆರೆ - 2185
ಚಿಕ್ಕಬಳ್ಳಾಪುರ- 573
ತುಮಕೂರು- 5631
ಶಿವಮೊಗ್ಗ- 1977
ಬೀದರ್- 5624
ಬಳ್ಳಾರಿ- 9795
ಕೊಪ್ಪಳ-1994
ಬೆಳಗಾವಿ -4299
ವಿಜಯಪುರ- 4736
ಹಾವೇರಿ- 8344
ಚಾಮರಾಜನಗರ-5853
ಹಾಸನ -19955
ದಕ್ಷಿಣ ಕನ್ನಡ- 159
ಉಡುಪಿ- 509
ಬೆಂಗಳೂರು ನಗರದಲ್ಲಿ 34220 ಎಕರೆ 21.13 ಗುಂಟೆ ಒತ್ತುವರಿ ಆಗಿದೆ. ದಾವಣಗೆರೆಯಲ್ಲಿ 13,379 ಎಕರೆ 15 ಗುಂಟೆ, ಬಳ್ಳಾರಿಯಲ್ಲಿ 27904.32 ಎಕರೆ, ಹಾವೇರಿಯಲ್ಲಿ 23,047.36 ಎಕರೆ ಹಾಗೂ ಹಾಸನದಲ್ಲಿ 31,565.37 ಎಕರೆ ಜಮೀನು ಒತ್ತುವರಿ ಮಾಡಲಾಗಿದೆ.
ಕ್ರಮ ಇಲ್ಲ!
ಸರ್ಕಾರಿ ಭೂಮಿಯನ್ನು ಕಬಳಿಕೆ ಮಾಡಲು ಸಹಕಾರ ನೀಡಿದ ಸರ್ಕಾರಿ ಅಧಿಕಾರಿಗಳಿಗಳ ವಿರುದ್ಧ ಯಾವುದೇ ಕ್ರಮ ಆಗಿಲ್ಲ. ರಾಜ್ಯದಲ್ಲಿ ಇಂತಹ ಪ್ರಕರಣ ಕಂಡು ಬಂದಿಲ್ಲ ಎಂದು ಸರ್ಕಾರ ಉತ್ತರ ನೀಡಿದೆ.
ಎಷ್ಟು ಒತ್ತುವರಿ ತೆರವು?
ರಾಜ್ಯದಲ್ಲಿ ಬಲಾಢ್ಯರು ಸೇರಿದಂತೆ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ್ದನ್ನು ಕೆಲವು ಕಡೆಗಳಲ್ಲಿ ತೆರವುಗೊಳಿಸಲಾಗಿದೆ. ಒಟ್ಟು 120203-17 ಎಕರೆ ಜಮೀನು ಒತ್ತುವರಿ ತೆರವು ಮಾಡಲಾಗಿದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಬೆಂಗಳೂರು ನಗರದಲ್ಲಿ 15213 ಎಕರೆ ಹಾಗೂ 16.1 ಗುಂಟೆ ಜಮೀನು ತೆರವು ಮಾಡಲಾಗಿದೆ. ಹಾಸನದಲ್ಲಿ ದೊಡ್ಡ ಪ್ರಮಾಣದಲ್ಲಿ ಒತ್ತುವರಿ ನಡೆದಿದ್ದು ಈ ಪೈಕಿ, 3323.13 ಎಕರೆ ಒತ್ತುವರಿ ತೆರವು ಮಾಡಲಾಗಿದೆ. ಅದೇ ರೀತಿಯಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 4399.5 ಎಕರೆ ಜಮೀನು ಒತ್ತುವರಿ ತೆರವು ಮಾಡಲಾಗಿದೆ.
ರಕ್ಷಣೆಗೆ ಲ್ಯಾಂಡ್ ಬೀಟ್ ಆ್ಯಪ್
ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸಲು ಲ್ಯಾಂಡ್ ಬೀಟ್ ಆ್ಯಪ್ ಇದೆ. ಕಂದಾಯ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರು 'ಲ್ಯಾಂಡ್ ಬೀಟ್ ಆ್ಯಪ್' ಮೂಲಕ ಭೂಮಿಯ ಸಮೀಕ್ಷೆ ನಡೆಸಿ ಒತ್ತುವರಿ ಪತ್ತೆಮಾಡಲಾಗುತ್ತದೆ.
ಅಕ್ರಮವಾಗಿ ಸರ್ಕಾರಿ ಜಮೀನುಗಳಾದ ಗೋಮಾಳ, ಗುಂಡುತೋಪು, ಕೆರೆಗಳನ್ನು ಒತ್ತುವರಿ ಮಾಡಿದ್ದು ಗಮನಕ್ಕೆ ಬಂದಲ್ಲಿ ನಿರ್ಮಾಣ ಹಂತದ ಕಟ್ಟಡಗಳನ್ನು ಕೆಡವಿ, ಒತ್ತುವರಿದಾರರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಕಂದಾಯ ಇಲಾಖೆ ಮಾಹಿತಿ ನೀಡಿದೆ.
ಎಟಿ ರಾಮಸ್ವಾಮಿ ವರದಿ ತೆರೆದಿಟ್ಟ ಸತ್ಯ
ಭೂಗಳ್ಳರ ಪಾಲಾಗಿರುವ ಸರಕಾರಿ ಭೂಮಿ ಕಬಳಿಕೆ ಕುರಿತಾಗಿ ಮಾಜಿ ಶಾಸಕ ಎಟಿ ರಾಮಸ್ವಾಮಿ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚನೆ ಮಾಡಲಾಗಿತ್ತು. ಈ ಸಮಿತಿ ವರದಿ ನೀಡಿದೆ. ಆದರೆ ಈ ವರದಿಯನ್ನು ಜಾರಿಗೊಳಿಸಲು ಸರ್ಕಾರ ಮನಸ್ಸು ಮಾಡಿಲ್ಲ.
ಬದಲಿಗೆ ಪರಿಶೀಲಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರು. ಎಟಿ ರಾಮಸ್ವಾಮಿ ವರದಿಯಲ್ಲಿ ಸರ್ಕಾರಿ ಭೂಮಿ ಹೇಗೆ ಬಲಾಢ್ಯರ ಪಾಲಾಗಿದೆ ಎಂಬ ಬಗ್ಗೆ ದಾಖಲೆ ಸಹಿತ ಮಾಹಿತಿ ನೀಡಲಾಗಿದೆ.
ವರದಿ: ಜಾನ್ ಬೆಂಗಳೂರು.