*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ದಾವಣಗೆರೆ ದಕ್ಷಿಣ ಉಪ ಚುನಾವಣೆ ಕಾಂಗ್ರೆಸ್ ಟಿಕೆಟ್ ಶಾಮನೂರು ಕುಟುಂಬದ ಸಮರ್ಥ್‌ಗೆ ಸಿಕ್ಕಿದೆ. ಅಲ್ಪಸಂಖ್ಯಾತ ಸಮುದಾಯವು 4 ಷರತ್ತುಗಳ ಮೇಲೆ ಟಿಕೆಟ್ ಬಿಟ್ಟುಕೊಟ್ಟಿದ್ದು, ಹೈಕಮಾಂಡ್ ಪ್ರಮುಖ ಭರವಸೆ ನೀಡಿದೆ
ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಕಾಂಗ್ರೆಸ್ ಪಾಳಯದಲ್ಲಿ ದೊಡ್ಡ ಮಟ್ಟದ ಬಿರುಗಾಳಿಯೇ ಎದ್ದಿತ್ತು. ತಮ್ಮ ಪುತ್ರನಿಗೆ ಟಿಕೆಟ್ ಬೇಕು ಎಂದು ಎಸ್‌ಎಸ್ ಮಲ್ಲಿಕಾರ್ಜುನ ಒಂದೆಡೆಯಾದ್ರೆ, ಅಬ್ದುಲ್ ಜಬ್ಬರ್ ಅಥವಾ ಇತರೆ ಮುಸ್ಲಿಂ ನಾಯಕರಿಗೆ ಟಿಕೆಟ್ ಕೊಡಿ ಎಂದು ಸಚಿವ ಜಮೀರ್ ಸೇರಿ ಅಲ್ಪಸಂಖ್ಯಾತ ಸಚಿವ, ಶಾಸಕ, ಎಂಎಲ್‌ಸಿ ಸೇರಿದಂತೆ ಮುಖಂಡರು ಹೈಕಮಾಂಡ್‌ಗೆ ಒತ್ತಡ ಹೇರುತ್ತಿದ್ದರು..
ಯಾವಾಗ ಟಿಕೆಟ್ ಫೈಟ್ ತಾರಕಕ್ಕೇರಿತೋ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ದಿಲ್ಲಿಯಿಂದ ಬೆಂಗಳೂರಿಗೆ ದೌಡಾಯಿಸಿದರು. ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಮುಸ್ಲಿಂ ನಾಯಕರು ಹಾಗೂ ಎಸ್‌ಎಸ್ ಮಲ್ಲಿಕಾರ್ಜುನ ಜತೆ ಸರಣಿ ಸಭೆಗಳನ್ನು ನಡೆಸಿದರು.
ಮುಸ್ಲಿಂ ನಾಯಕರ ಜತೆ ಮಹತ್ವದ ಸಭೆ - ಹಲವರು ಭಾಗಿ
ಮುಸ್ಲಿಂ ನಾಯಕರ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ ಅವರೊಂದಿಗೆ ಸುರ್ಜೇವಾಲಾ ಸುದೀರ್ಘ ಚರ್ಚೆ ನಡೆಸಿದರು. ಸಚಿವ ಜಮೀರ್ ಅಹ್ಮದ್ ಖಾನ್, ಮುಸ್ಲಿಂ ಶಾಸಕರಾದ ರಿಜ್ವಾನ್ ಅರ್ಷದ್, ಎನ್.ಎ. ಹ್ಯಾರಿಸ್, ನಸೀರ್ ಅಹಮದ್, ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹಮದ್, ಸಚಿವ ರಹೀಂ ಖಾನ್, ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ಭೈರತಿ ಸುರೇಶ್ ಮುಂತಾದವರು ಭಾಗವಹಿಸಿದ್ದರು. ಸರ್ಕಾರದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಪ್ರಾತಿನಿಧ್ಯ ನೀಡುವ
ಷರತ್ತಿನ ಮೇಲೆ ಮುಸ್ಲಿಂ ನಾಯಕರು ಟಿಕೆಟ್ ಬಿಟ್ಟುಕೊಟ್ಟದ್ದಾರೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಜೂನ್ ತಿಂಗಳಲ್ಲಿ ಸುಮಾರು 12 ವಿಧಾನ ಪರಿಷತ್ ಸದಸ್ಯರು ನಿವೃತ್ತರಾಗುತ್ತಿದ್ದು, ಆ ಸ್ಥಾನಗಳಿಗೆ ಮುಸ್ಲಿಂ ನಾಯಕರಿಗೆ ಆದ್ಯತೆ ನೀಡಬೇಕು.
ಮುಂಬರುವ ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡಬೇಕು.
ನಿಗಮ - ಮಂಡಳಿಗಳ ನೇಮಕಾತಿಯಲ್ಲಿ ಅಲ್ಪಸಂಖ್ಯಾತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕು.
ಮುಂದಿನ ಸಚಿವ ಸಂಪುಟ ಪುನಾರಚನೆ ವೇಳೆ ಮುಸ್ಲಿಮರಿಗೆ ಹೆಚ್ಚಿನ ಸಚಿವ ಸ್ಥಾನ ನೀಡಬೇಕು.
ಮುಸ್ಲಿಮರು ಬೆಂಬಲ ಕೊಡ್ತಾರಾ?
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿಂ ಸಮುದಾಯದ ಮತಗಳು 75 ಸಾವಿರಕ್ಕಿಂತ ಅಧಿಕವಿದೆ. ಗೆಲುವಿನಲ್ಲಿ ಇವು ಪ್ರಮುಖ ಪಾತ್ರವಹಿಸಲಿವೆ. ಶಾಮನೂರು ಕುಟುಂಬಕ್ಕೆ ಬಿಟ್ಟು ಎಸ್‌ಸಿ, ಎಸ್‌ಟಿ ಅಥವಾ ಹಿಂದುಳಿದ ವರ್ಗದ ಬೇರೆ ಯಾರಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಡುತ್ತೇವೆ ಎಂದು ಸ್ಥಳೀಯ ಮುಸ್ಲಿಂ ನಾಯಕರು ಹೇಳುತ್ತಿದ್ದರು. ಸದ್ಯ ಹೈಕಮಾಂಡ್ ಮನವೊಲಿಕೆ ಬಳಿಕ ಕ್ಷೇತ್ರದ ಅಲ್ಪಸಂಖ್ಯಾತರು ಶಾಮನೂರು ಕುಟುಂಬಕ್ಕೆ ಆದ್ಯತೆ ನೀಡುತ್ತಾರೆಯೋ ಅಥವಾ ಸೇಡು ತೀರಿಸಿಕೊಳ್ಳುತ್ತಾರೋ ಕಾದುನೋಡಬೇಕಿದೆ.