* ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್:* ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮಂಗಳೂರು ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಪುದು ಗ್ರಾಮದ ಫರಂಗಿಪೇಟೆ ಎಂಬಲ್ಲಿ ನೇತ್ರಾವತಿ ನದಿ ತೀರದಲ್ಲಿ ಅಪಾರ ಪ್ರಮಾಣದ ಆಧಾರ್ ಕಾರ್ಡ್ ಗಳು ನದಿ ತಟದಲ್ಲಿರುವುದು ಕಂಡುಬಂದಿದ್ದು, ಸ್ಥಳೀಯ ಶಾಸಕರೂ ಆಗಿರುವ ವಿಧಾನಸಭಾಧ್ಯಕ್ಷ ಯು. ಟಿ. ಖಾದರ್ ಅವರು ತನಿಖೆಗೆ ಸೂಚಿಸಿದ್ದಾರೆ.
ಕಾರ್ಡ್ ಗಳು ನದಿ ತಟದಲ್ಲಿರುವುದನ್ನು ಕಂಡು ಸಾರ್ವಜನಿಕರು ಸ್ಥಳೀಯ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ನೀಡಿದ ಮಾಹಿತಿ ಮೇರೆಗೆ ಅಧ್ಯಕ್ಷರು ಹಾಗೂ ಸಾರ್ವಜನಿಕರು ಸೇರಿ ಪತ್ತೆಯಾಗಿರುವ ಆಧಾರ್ ಕಾರ್ಡ್ ಗಳನ್ನು ಸಂಗ್ರಹಿಸಿದ್ದಾರೆ. ಈ ಕುರಿತು ಸ್ಥಳೀಯ ಶಾಸಕರಾದ ತನಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆಧಾರ್ ಕಾರ್ಡ್ ಗಳು ಇಷ್ಟೊಂದು ಪ್ರಮಾಣದಲ್ಲಿ ನದಿ ತಟದಲ್ಲಿ ಪತ್ತೆಯಾಗಲು ಕಾರಣವೇನು, ಇದಕ್ಕೆ ಕಾರಣರಾದವರು ಯಾರು ಎಂಬುದನ್ನು ತನಿಖೆ ನಡೆಸಿ, ಪತ್ತೆ ಹಚ್ಚಿ, ತಮ್ಮ ಇಲಾಖೆ ಮುಖಾಂತರ ಕೂಡಲೇ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಗತ್ಯ ಕ್ರಮ ಕೈಗೊಳ್ಳಿ ಎಂದು ಸ್ಪೀಕರ್ ಯು.ಟಿ. ಖಾದರ್ ಅವರು ಯುಐಡಿಎಐ ಯೋಜನಾ ವ್ಯವಸ್ಥಾಪಕರಿಗೆ ಪತ್ರ ಬರೆದು ಸೂಚನೆ ನೀಡಿದ್ದಾರೆ.
ಅಂಚೆ ವಿಭಾಗದವರು ಏನಂತಾರೆ?ಹೊಳೆ ಬದಿಯಲ್ಲಿ ಆಧಾರ್ ಕಾಡ್೯ಗಳ ರಾಶಿ ಪತ್ತೆಯಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ನಾಳೆ(ಗುರುವಾರ) ಅಂಚೆ ಇಲಾಖೆಯ ನಿರೀಕ್ಷಕರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ಮುಂದಿನ ಕ್ರಮದ ಬಗ್ಗೆ ಬಳಿಕ ನಿರ್ಧರಿಸಲಾಗುವುದು ಎಂದು ಮಂಗಳೂರು ಅಂಚೆ ವಿಭಾಗದ ಉಪಾಧೀಕ್ಷಕ ದಿನೇಶ್ ತಿಳಿಸಿದ್ದಾರೆ.