*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*
*ಶಿವಮೊಗ್ಗ* ಜಿಲ್ಲೆಯ ಶಿಕಾರಿಪುರ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ಅಕ್ರಮವಾಗಿ ನಾಡ ಬಂದೂಕುಗಳನ್ನು ತಯಾರಿಸುತ್ತಿದ್ದ ಜಾಲವನ್ನು ಪೊಲೀಸರು ಭೇದಿಸಿದ್ದಾರೆ. ಫೆಬ್ರವರಿ 4ರಂದು ಸಂಜೆ ಸುಮಾರು 6 ಗಂಟೆಗೆ ಶಿಕಾರಿಪುರ ಪಟ್ಟಣ ಪೊಲೀಸರು ನ್ಯಾಯಾಲಯದಿಂದ ಪಡೆದ ಸರ್ಚ್ ವಾರೆಂಟ್‌ನೊಂದಿಗೆ ದಾಳಿ ನಡೆಸಿದರು.
ವೃತ್ತಿಯಲ್ಲಿ ಕಾರ್ಪೆಂಟರ್ ಆಗಿದ್ದ 67 ವರ್ಷದ ಲಕ್ಷ್ಮಣಪ್ಪ ಎಂಬಾತ ತನ್ನ ಹಳೆಯ ಮನೆಯಲ್ಲಿ ಗುಜರಿ ಸಾಮಗ್ರಿಗಳನ್ನು ಬಳಸಿ ಸಿಂಗಲ್ ಬ್ಯಾರಲ್ ನಾಡ ಬಂದೂಕುಗಳನ್ನು ತಯಾರಿಸಿ ಮಾರಾಟಕ್ಕೆ ಇಟ್ಟುಕೊಂಡಿದ್ದ. ದಾಳಿ ವೇಳೆ 7 ಸಿಂಗಲ್ ಬ್ಯಾರಲ್ ನಾಡ ಬಂದೂಕುಗಳು ಹಾಗೂ ಅವುಗಳ ತಯಾರಿಕೆಗೆ ಬಳಸಿದ ವಿವಿಧ ಭಾಗಗಳು, ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿಕೊಂಡರು.
ಬಾತ್ಮಿದಾರರ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ಆಸ್ತ್ರ (ತಿದ್ದುಪಡಿ) ಕಾಯ್ದೆ 2019ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಶಿಕಾರಿಪುರ ಉಪವಿಭಾಗದ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪ್ರದೀಪ್ ನೇತೃತ್ವದ ತಂಡದಲ್ಲಿ ನಾಗರಾಜ್, ರವಿ ನಾಯ್ಕ್ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.