ಕುಮಟಾ: ರಾಷ್ಟ್ರೀಯ ಹೆದ್ದಾರಿ-66ರ ಚತುಷ್ಪಥ ಕಾಮಗಾರಿ ಹಾಗೂ ಕುಮಟಾ-ಶಿರಸಿ (ರಾ.ಹೆ. 767(ಇ)) ರಸ್ತೆ ಕಾಮಗಾರಿಗಳ ವಿಳಂಬದ ಬಗ್ಗೆ ಶಾಸಕ ದಿನಕರ ಶೆಟ್ಟಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾಮಗಾರಿಗಳನ್ನು ತಕ್ಷಣ ಚುರುಕುಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಒಂದು ತಿಂಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದಲ್ಲಿ ಟೋಲ್ ಸಂಗ್ರಹ ಬಂದ್ ಮಾಡಲು ಜಿಲ್ಲಾಧಿಕಾರಿಗೆ ಪತ್ರ ಬರೆಯುವುದಾಗಿ ಅವರು ಐಆರ್‌ಬಿ ಕಂಪನಿಗೆ ಎಚ್ಚರಿಕೆ ನೀಡಿದರು.
ತಾಲೂಕು ಸೌಧದಲ್ಲಿ ಸೋಮವಾರ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಐಆರ್‌ಬಿ, ಆರ್‌ಎನ್‌ಎಸ್ ಕಂಪನಿ, ಅರಣ್ಯ ಇಲಾಖೆ ಹಾಗೂ ಬಿಎಸ್‌ಎನ್‌ಎಲ್ ಅಧಿಕಾರಿಗಳ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಚತುಷ್ಪಥ ಕಾಮಗಾರಿಗೆ ಗಡುವು:
ಮಳೆಗಾಲ ಮುಗಿದಿದ್ದರೂ ಚತುಷ್ಪಥ ಕಾಮಗಾರಿ ನಿರೀಕ್ಷಿತ ವೇಗದಲ್ಲಿಲ್ಲ ಎಂದು ಅಸಮಾಧಾನಗೊಂಡ ಶಾಸಕರು, ತಕ್ಷಣ ಕಾಮಗಾರಿ ಮುಂದುವರಿಸಲು ಸೂಚಿಸಿದರು. ಕಳೆದ ಸಭೆಯ ಬಳಿಕ ಕೇವಲ 100 ಮೀಟರ್ ಚರಂಡಿ ನಿರ್ಮಿಸಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕನ್ಸಲ್ಟಂಟ್ ಇಂಜಿನಿಯರ್ ದಯಾನಂದ ಅವರು ಉತ್ತರಿಸಿದಾಗ, ಶಾಸಕರು ಕೋಪಗೊಂಡರು. "ಐಆರ್‌ಬಿಯ ಕಾಮಗಾರಿಯ ಪ್ರಗತಿಯನ್ನು ನೀವು ಸರಿಯಾಗಿ ನಿಗಾವಹಿಸಿಲ್ಲ, ನಿಮ್ಮೊಳಗೆ ಹೊಂದಾಣಿಕೆ ಇದ್ದಂತಿದೆ. ಟೋಲ್ ಆರಂಭಿಸಲು ಅನುಮತಿಸಿದ್ದೇ ನಮ್ಮ ತಪ್ಪು" ಎಂದು ಶಾಸಕರು ತರಾಟೆಗೆ ತೆಗೆದುಕೊಂಡರು.
ಎಚ್ಚರಿಕೆ:
ಒಂದು ತಿಂಗಳಲ್ಲಿ ನಿರೀಕ್ಷಿತ ಪ್ರಗತಿ ಕಾಣದಿದ್ದಲ್ಲಿ ಜಿಲ್ಲಾಧಿಕಾರಿಗೆ ಪತ್ರ ಬರೆದು ಟೋಲ್ ಬಂದ್ ಮಾಡಲು ಸೂಚಿಸಲಾಗುವುದು ಎಂದು ಐಆರ್‌ಬಿ ಕಂಪನಿಗೆ ಖಡಕ್ ಎಚ್ಚರಿಕೆ ನೀಡಿದರು. "ಇಂದೇ ನೀವು ಲಿಖಿತವಾಗಿ ಏನೇನು ಕಾಮಗಾರಿ ಮಾಡುತ್ತೀರಿ ಎಂದು ವಿವರ ಕೊಡಬೇಕು. ಮುಂದಿನ ಸಭೆಗೆ ಮೇಲಾಧಿಕಾರಿಗಳು ಕಡ್ಡಾಯವಾಗಿ ಹಾಜರಿರಬೇಕು. ಪ್ರಗತಿ ಇಲ್ಲದಿದ್ದರೆ ನಿಮ್ಮನ್ನು ಉಪವಿಭಾಗಾಧಿಕಾರಿ ಕೊಠಡಿಯಲ್ಲೇ ಕೂಡ್ರಿಸುತ್ತೇವೆ" ಎಂದು ಶಾಸಕರು ಗಂಭೀರ ಎಚ್ಚರಿಕೆ ನೀಡಿದರು.
ಐಆರ್‌ಬಿ ಇಂಜಿನಿಯರ್ ಮಲ್ಲಿಕಾರ್ಜುನ ಅವರು, ಹೊನ್ನಾಂವ ಬಳಿ ಕಾಂಡ್ಲಾ ಗಿಡಗಳ ಕಟಾವಾದ ಕೂಡಲೇ ಸೇತುವೆ ಕಾರ್ಯ ಆರಂಭಿಸುವುದಾಗಿ ತಿಳಿಸಿದರು. ತಕ್ಷಣ ಕಾಂಡ್ಲಾ ಕಟಾವಿಗೆ ಕ್ರಮ ವಹಿಸುವಂತೆ ಆರ್‌ಎಫ್‌ಒ ರಾಜು ನಾಯ್ಕ ಹಾಗೂ ಡಿಆರ್‌ಎಫ್‌ಒ ರಾಘವೇಂದ್ರ ಅವರಿಗೆ ಶಾಸಕರು ಸೂಚಿಸಿದರು. ಅಳ್ವೆಕೋಡಿಯಲ್ಲಿ ಭೂ ಸಂಬಂಧಿತ ಪರಿಹಾರ ವಿತರಣೆ ಆಗಿದೆ ಎಂದೂ ಮಲ್ಲಿಕಾರ್ಜುನ ಮಾಹಿತಿ ನೀಡಿದರು.
ಕುಮಟಾ-ಶಿರಸಿ ರಸ್ತೆ ಕಾಮಗಾರಿಗೆ ಡಿಸೆಂಬರ್ ಗಡುವು:
ಕುಮಟಾ-ಶಿರಸಿ ರಾ.ಹೆ. 767(ಇ) ರಸ್ತೆ ಕಾಮಗಾರಿ ನಡೆಸುತ್ತಿರುವ ಆರ್‌ಎನ್‌ಎಸ್ ಕಂಪನಿ ತನ್ನ ವಿಶ್ವಾಸ ಕಳೆದುಕೊಂಡಿದೆ ಎಂದು ಶಾಸಕರು ಹೇಳಿದರು. ಡಿಸೆಂಬರ್ ಅಂತ್ಯದೊಳಗೆ ಕಾಮಗಾರಿ ಸಂಪೂರ್ಣಗೊಳ್ಳಲೇಬೇಕು ಎಂದು ಆರ್‌ಎನ್‌ಎಸ್ ಕಂಪನಿಯ ಎಂ.ಡಿ. ನಿತೀಶ್ ಶೆಟ್ಟಿ ಹಾಗೂ ಇಂಜಿನಿಯರ್ ಆರ್. ಬಿ. ಪಾಟೀಲ ಅವರಿಗೆ ಸ್ಪಷ್ಟ ಸೂಚನೆ ನೀಡಿದರು.
ಯೋಜಿತ ಪ್ರದೇಶದಲ್ಲಿ 526 ಮರಗಳ ಕಟಾವು ಆಗಬೇಕಿದೆ ಎಂದು ಆರ್.ಬಿ. ಪಾಟೀಲ ತಿಳಿಸಿದಾಗ, ಅರಣ್ಯ ಇಲಾಖೆಯ ಅನುಮತಿ ಮತ್ತು ಸಹಕಾರದೊಂದಿಗೆ ಕೂಡಲೇ ಮರ ಕಟಾವು ಆರಂಭಿಸಬೇಕು. ಬಾಕಿ ಇರುವ 7 ಕಿ.ಮೀ. ರಸ್ತೆ ಕಾಮಗಾರಿಯನ್ನು ವೇಗವಾಗಿ ಪೂರ್ಣಗೊಳಿಸಬೇಕು. "ಮುಂದಿನ ಸಭೆಯಲ್ಲಿ ಸಬೂಬುಗಳು ಪುನರಾವರ್ತನೆಯಾದರೆ ಸಹಿಸುವುದಿಲ್ಲ" ಎಂದು ಗಂಭೀರ ಎಚ್ಚರಿಕೆ ನೀಡಿದರು. ಕಾಮಗಾರಿಯ ಪ್ರತಿನಿತ್ಯದ ಪ್ರಗತಿ ನಿಗಾವಣೆಗೆ ತಹಸೀಲ್ದಾರ್ ಕಚೇರಿಯ ಅಧಿಕಾರಿಯನ್ನು ನಿಯೋಜಿಸುವಂತೆ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ ಅವರಿಗೆ ಸೂಚಿಸಿದರು.
ಬಿಎಸ್‌ಎನ್‌ಎಲ್ ಟವರ್ ವಿಳಂಬಕ್ಕೆ ಆಕ್ರೋಶ:
ಬಿಎಸ್‌ಎನ್‌ಎಲ್ ಟವರ್ ಸ್ಥಾಪನೆಯ ವಿಳಂಬದ ಕುರಿತು ಯಲವಳ್ಳಿ ಗ್ರಾಮಸ್ಥರು ಸಭೆಯಲ್ಲಿ ಆಗ್ರಹಿಸಿದರು. ಬಿಎಸ್‌ಎನ್‌ಎಲ್ ಇಂಜಿನಿಯರ್ ಮಾತನಾಡಿ, ಯಲವಳ್ಳಿಯಲ್ಲಿ ಮುಂದಿನ 10 ದಿನಗಳಲ್ಲಿ ಟವರ್ ಕಾರ್ಯಾಚರಿಸಲಿದೆ ಎಂದು ಭರವಸೆ ನೀಡಿದರು. ನಾಗೂರಿನಲ್ಲಿ ಸ್ಥಳ ಹಸ್ತಾಂತರ ಆಗದಿರುವ ಕಾರಣ ವಿಳಂಬವಾಗಿದ್ದು, 2 ತಿಂಗಳಲ್ಲಿ ಟವರ್ ಕಾರ್ಯಾರಂಭವಾಗಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ, ಗ್ರೇಡ್-2 ತಹಸೀಲ್ದಾರ್ ಸತೀಶ ಗೌಡ, ಆರ್‌ಎಫ್‌ಒ ಪ್ರೀತಿ ನಾಯ್ಕ, ಪಿಎಸ್‌ಐ ಮಂಜುನಾಥ ಗೌಡರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.