ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳ
ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣಗಳ ತನಿಖೆಗೆ ರಾಜ್ಯ ಸರ್ಕಾರ ರಚಿಸಿದ್ದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಸದಸ್ಯ, ಪೊಲೀಸ್ ನೇಮಕಾತಿ ವಿಭಾಗದ ಡಿಐಜಿ ಎಂ.ಎನ್.ಅನುಚೇತ್ ಅವರು ಅಮೆರಿಕ ಪ್ರವಾಸಕ್ಕೆ ತೆರಳಿದ್ದಾರೆ. ಪ್ರಕರಣದ ತನಿಖೆಯ ಮಧ್ಯೆಯೇ ಅವರು ಪ್ರವಾಸಕ್ಕೆ ಹೋಗಿದ್ದಾರೆ ಎಂದು ಗೊತ್ತಾಗಿದೆ.
ರಾಜ್ಯ ಸರ್ಕಾರವು ಆಗಸ್ಟ್ 19ರಿಂದ 31ರವರೆಗೆ ವೇತನ ಸಹಿತ ರಜೆಯನ್ನು ಮಂಜೂರು ಮಾಡಿದ್ದು, ಅನುಚೇತ್ ಅವರು ಆಗಸ್ಟ್ 18ರಿಂದ ಆರಂಭವಾಗಿರುವ 'ಇಂಟೆಲಿಜೆಂಟ್ ಟ್ರಾನ್ಸ್‌ಪೋರ್ಟೇಷನ್ ಸೊಸೈಟಿ ಆಫ್ ಅಮೆರಿಕ ವರ್ಲ್ಡ್ ಕಾಂಗ್ರೆಸ್-2025'ರಲ್ಲಿ ಭಾಗವಹಿಸಲು ತೆರಳಿದ್ದಾರೆ ಎಂದು ಗೊತ್ತಾಗಿದೆ.
ವೇತನ ಸಹಿತ ರಜೆ ಮಂಜೂರು ಮಾಡುವಂತೆ ಕೋರಿ, ಅನುಚೇತ್ ಅವರು ಜುಲೈ 16ರಂದು ಮನವಿ ಸಲ್ಲಿಸಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೂಚನೆಯ ಮೇರೆಗೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿಯವರು ಆಗಸ್ಟ್ 1ರಂದೇ ಪ್ರವಾಸಕ್ಕೆ ಅನುಮತಿ ನೀಡಿ ಆದೇಶ ಹೊರಡಿಸಿದ್ದರು.
ಅನುಚೇತ್ ಅವರು ಆಗಸ್ಟ್ 18ರಂದೇ ಅಮೆರಿಕಕ್ಕೆ ತೆರಳಿದ್ದಾರೆ. ಸೆ.3 ಅಥವಾ 4ರಂದು ವಾಪಸ್ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.