(ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್) ಉಡುಪಿ | ಬಿಸಿಲಿನ ತಾಪಕ್ಕೆ"ಬರಿದಾದ ಕರಾವಳಿ ಮೀನುಗಾರರ ಬದುಕು: ಸರಕಾರದ ಮುಂದೆ ಅಳಲು!

(ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್) 

ಕರಾವಳಿಯ ಮೀನುಗಾರರ ಬದುಕು ಸಮುದ್ರದ ಅಲೆಗಳಷ್ಟೇ ಚಂಚಲ. ಏರುತ್ತಿರುವ ತಾಪಮಾನವು ಕೃಷಿ, ಹೈನುಗಾರಿಕೆ, ಮೀನುಗಾರಿಕೆ ಹೀಗೆ ಹಲವು ಕ್ಷೇತ್ರಗಳಿಗೆ ಶಾಪವಾಗಿ ಪರಿಣಮಿಸುತ್ತಿದೆ. ಹೆಚ್ಚುತ್ತಿರುವ ಬಿಸಿಲಿನಿಂದ ಉಡುಪಿಯ ಮೀನುಗಾರರ ಬದುಕು ತಲ್ಲಣಕ್ಕೊಳಗಾಗಿದ್ದು, ಅವಧಿಗೂ ಮುನ್ನವೇ ಮಲ್ಪೆ ಬಂದರಿನಲ್ಲಿ ದೋಣಿಗಳು ಲಂಗರು ಹಾಕಿ ನಿಂತಿವೆ.
ಕಳೆದ ವರ್ಷ ಅತಿಯಾದ ಮಳೆಯಿಂದ ಅವಧಿಗೂ ಮುನ್ನ ದೋಣಿಗಳನ್ನು ಬಂದರಿನಲ್ಲಿ ನಿಲ್ಲಿಸುವ ಸ್ಥಿತಿ ಒದಗಿತ್ತು.
ಈ ಬಾರಿ ಅತಿಯಾದ ಬಿಸಿಲಿನಿಂದ ಸಮುದ್ರದ ಮೇಲ್ಮೈ ಬಿಸಿಯಾಗಿದ್ದು, ಶಾಖ ತಡೆಯಲಾರದೆ ಮೀನುಗಳು ನೀರಿನಾಳಕ್ಕೆ ಇಳಿಯುವುದರಿಂದ ಮೀನುಗಾರರು ದಿನಂಪ್ರತಿ ಖಾಲಿ ಬಲೆಯೊಂದಿಗೆ ಮನೆಗೆ ಹಿಂದಿರುಗುವ ಪರಿಸ್ಥಿತಿ ಒದಗಿದೆ ಎಂಬುದು ಮೀನುಗಾರರ ಅಳಲಾಗಿದೆ.
ಈ ಕುರಿತು ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ ಜತೆಗೆ ಮಾತನಾಡಿದ ಮೀನುಗಾರರು, “ಕೆಂಡದಂತಹ ಬಿಸಿಲನ್ನೂ ಲೆಕ್ಕಿಸದೆ ಸಮುದ್ರಕ್ಕೆ ಇಳಿಯುತ್ತೇವೆ. ಆದರೂ ಯಾವುದೇ ಪ್ರಯೋಜನವಿಲ್ಲ. ಈಗಾಗಲೇ ಒಂದಷ್ಟು ಪರ್ಸಿನ್‌ ಬೋಟ್‌ಗಳನ್ನು ದಡದಲ್ಲಿ ನಿಲ್ಲಿಸಲಾಗಿದೆ. ವರ್ಷದ ಆರಂಭದಲ್ಲಿ ಯತೇಚ್ಛವಾಗಿ ದೊರೆಯುತ್ತಿದ್ದ ಬಂಗುಡೆ, ಭೂತಾಯಿ ಮೀನುಗಳು ಕೂಡ ಈಗ ಬಲೆಗೆ ಸಿಗುತ್ತಿಲ್ಲ. ಆದ್ದರಿಂದ ಮೀನಿನ ದರವೂ ಏರಿಕೆಯಾಗಿದೆ. ಭರಪೂರ ಶಿಕಾರಿಯ ಸಮಯ ಮೀನಿಗೆ ಬೆಲೆ ಇರುವುದಿಲ್ಲ, ಈಗ ಕೆಜಿ ಭೂತಾಯಿ ಮೀನಿಗೆ 400 ರೂಪಾಯಿ ಇದೆ. ಆದರೆ ಬಲೆಯಲ್ಲಿ ಮೀನುಗಳಿಲ್ಲ” ಎಂದು ಅಳಲು ತೋಡಿಕೊಂಡಿದ್ದಾರೆ.
  ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್ ಪ್ರತಿಕ್ರಿಸಿದ  ಮೀನುಗಾರ ನವೀನ್‌, “ತಾಪಮಾನ ಅಧಿಕವಾದ್ದರಿಂದ ಶಿಕಾರಿಯಾಗುತ್ತಿಲ್ಲ. ಮೀನುಗಳು ಸಮುದ್ರದ ತಳಭಾಗ ಸೇರುತ್ತಿವೆ. ಪ್ರತಿವರ್ಷ ಬೇಸಿಗೆಯಲ್ಲೂ ಹೆಚ್ಚು ಕಡಿಮೆ ಇದೇ ಪರಿಸ್ಥಿತಿ ಇರುತ್ತದೆ. ಈ ಸಮಯದಲ್ಲಿ ಬೈಗೆ ಮೀನಿಗೆ ಬೇಡಿಕೆ ಹೆಚ್ಚು, ನಮ್ಮ ಆದಾಯದ ಮೂಲವೇ ಭೂತಾಯಿ ಮೀನು. ಈಗ ಭೂತಾಯಿಯ ಬೆಲೆ ಮುಗಿಲು ಮುಟ್ಟಿದೆ. ಆದರೆ ನಮ್ಮ ಬಲೆಗಳಲ್ಲಿ ಮೀನಿಲ್ಲ. ಮೀನು ಇದ್ದರೆ ಬದುಕು, ಮೀನಿಲ್ಲದೆ ನಮಗೆ ಬದುಕಿಲ್ಲ” ಎಂದು ಸಂಕಟ ವ್ಯಕ್ತಪಡಿಸಿದರು.
ಪ್ರತಿ ತಿಂಗಳು 5ನೇ ತಾರೀಖು ಸಮುದ್ರಕ್ಕೆ ಇಳಿವ ಮುನ್ನ ಪೂಜೆ ಸಲ್ಲಿಸುತ್ತೇವೆ, ಅದೊಂದು ರೂಢಿ. ಪ್ರಸಾದವನ್ನು ಸಮುದ್ರಕ್ಕೆ ಚೆಲ್ಲಿದರೆ ಶಿಕಾರಿಯಾಗುತ್ತದೆ ಎಂಬುದು ನಂಬಿಕೆ. ಈ ಬಾರಿಯೂ ಪೂಜೆ ಸಲ್ಲಿಸಿ ಪ್ರಸಾದ ನೀರಿಗೆ ಬೀರಿದ್ದೆವು. ಆದರೂ ಹೇಳಿಕೊಳ್ಳುವಂತಹ ಮೀನು ಶಿಕಾರಿಯಾಗಲಿಲ್ಲ. ಪ್ರತಿ ವರ್ಷ ಮೇ ತಿಂಗಳ ಕೊನೆಯಲ್ಲಿ ಲಂಗರು ಹಾಕುತ್ತಿದ್ದೆವು. ಈ ಬಾರಿ ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿಯೇ ದೋಣಿಗಳಿಗೆ ಲಂಗರು ಹಾಕಿ ನಿಲ್ಲಿಸುವ ದುಃಸ್ಥಿತಿ ಬಂದೊದಗಿದೆ. ಮೇ 14ರಂದು ನಾನೂ ಲಂಗರು ಹಾಕುತ್ತೇನೆ. ಸದ್ಯ 8 ಬೋಟ್‌ಗಳು, 10 ದೋಣಿಗಳು ನೀರಿಗೆ ಇಳಿಯುತ್ತಿದ್ದು, ದಿನವೂ ಡಿಸೇಲ್‌ಗೆ 45 ರಿಂದ 75 ಸಾವಿರ ರೂಪಾಯಿ ವೆಚ್ಚಮಾಡಿ ಖಾಲಿ ಕೈಯಲ್ಲಿ ಹಿಂದಿರುಗುತ್ತಿದ್ದೇವೆ” ಎಂದು ಬೇಸರ ವ್ಯಕ್ತಪಡಿಸಿದರು.

ಮೀನುಗಾರರ ಒಕ್ಕೂಟದ ಜಿಲ್ಲಾ ಕಾರ್ಯದರ್ಶಿ ಕವಿರಾಜ್‌ ಮಾತನಾಡಿ, “ಮೀನುಗಾರರ ಕಲ್ಯಾಣ ಮಂಡಳಿ ಸ್ಥಾಪನೆ ಮಾಡುವಂತೆ ವರುಷದ ಒಳಗೆ ಎರಡು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಇಲ್ಲಿಯವರೆಗೂ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕಲ್ಯಾಣ ಮಂಡಳಿ ಸ್ಥಾಪನೆಯಾದರೆ ಮೀನುಗಾರರ ಮಕ್ಕಳಿಗೆ ಶೈಕ್ಷಣಿಕ ನೆರವು ಒದಗಿಸುವುದರ ಜತೆಗೆ ಆಹಾರ ಭದ್ರತೆ ಹಾಗೂ ವಸತಿ ಕಲ್ಪಿಸಿಕೊಡುವ ಯೋಜನೆಯಲ್ಲಿದ್ದೇವೆ. ಮೀನುಗಾರ ಕಾರ್ಮಿಕರಿಗೆ ಉಚಿತ ವೈದ್ಯಕೀಯ ಸೇವೆ ಒದಗಿಸುವ ಬೇಡಿಕೆಯನ್ನು ಮುಂದಿಟ್ಟಿದ್ದೇವೆ” ಎಂದು ತಿಳಿಸಿದರು.

“ಬೋಟ್‌ ಒಂದು ಸಲ ಸಮುದ್ರಕ್ಕೆ ಇಳಿಯಲು ಮಂಜುಗಡ್ಡೆ, ಡೀಸೆಲ್‌, ಕಾರ್ಮಿಕರ ಆಹಾರ ಎಲ್ಲಾ ಸೇರಿದಂತೆ 5 ಲಕ್ಷ ರೂ. ವೆಚ್ಚ ತಗಲುತ್ತದೆ. 5 ರಿಂದ 6 ದಿನ ಸಮುದ್ರದಲ್ಲೇ ತಂಗಬೇಕು. ಇಷ್ಟೆಲ್ಲ ವ್ಯಯಿಸಿದ ನಂತರ ಖಾಲಿ ಕೈಯಲ್ಲಿ ಹಿಂದಿರುಗಿದರೆ ಮೀನುಗಾರರು ಸಾಲಗಾರರಾಗಿ, ಬದುಕು ಹೈರಾಣಾಗುತ್ತದೆ. ಆದ್ದರಿಂದಲೇ ಅವಧಿಗೂ ಮುನ್ನವೇ ದೋಣಿಗಳನ್ನು ಲಂಗರು ಹಾಕಿ ನಿಲ್ಲಿಸಲಾಗಿದೆ. ಇನ್ನು ಮಳೆಗಾಲ ಶುರುವಾದರೆ ಸಮುದ್ರಕ್ಕೆ ಇಳಿಯುವಂತಿಲ್ಲ. ಮೂರು ತಿಂಗಳು ಕೆಲಸವಿಲ್ಲದೆ ಖಾಲಿ ಕೂರಬೇಕು. ಮೀನುಗಾರರಿಗೆ ಬೇರೆ ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ಸರ್ಕಾರ ಮೀನುಗಾರರ ಬದುಕಿನ ಕುರಿತು ಕೊಂಚ ಕರುಣೆ ತೋರಬೇಕು” ಎಂದು ಮನವಿ ಮಾಡಿದರು.
ಪಶ್ಚಿಮಘಟ್ಟ ವಾಯ್ಸ್ ವರದಿಗಾರ:  ಕಿರಣ್ ಪೂಜಾರಿ. ಉಡುಪಿ
PGK

Post a Comment

Previous Post Next Post