*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್* ಶರಾವತಿ ಯೋಜನೆ ವಿರೋಧ: ಮಣ್ಣು ಪರೀಕ್ಷೆಗೆ ಬಂದ ಅಧಿಕಾರಿಗಳಿಗೆ ಶ್ರೀ ಕ್ಷೇತ್ರದ ಮಾರುತಿ ಗುರೂಜಿ ಇಂದ ತಡೆ.

*ಪಶ್ಚಿಮ ಘಟ್ಟ ವಾಯ್ಸ್ ಡೈಲಿ ನ್ಯೂಸ್*
ಗೇರುಸೊಪ್ಪ: ಶರಾವತಿ ಪಂಪ್ಡ್ ಸ್ಟೋರೇಜ್  ಯೋಜನೆಗೆ ಸ್ಥಳೀಯರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಯೋಜನಾ ಪ್ರದೇಶದಲ್ಲಿ ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಕ್ಕೆ ಬಂದಿದ್ದ ಕೇಂದ್ರ ಸರ್ಕಾರದ 13 ಅಧಿಕಾರಿಗಳ ತಂಡವನ್ನು ಸ್ಥಳೀಯರು ಅಡ್ಡಗಟ್ಟಿ ವಿಚಾರಣೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮದ (KPC) ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿರುವ ಗೇರುಸೊಪ್ಪಾ ಡ್ಯಾಂ ಸಮೀಪದ ಬೆಗೋಡಿನಲ್ಲಿ ಶುಕ್ರವಾರ ಮಧ್ಯಾಹ್ನ ಸುಮಾರು 11.30ರ ಸುಮಾರಿಗೆ ಕೇಂದ್ರ ಕೃಷಿ ಸಂಶೋಧನಾ ಮಂಡಳಿ (ICAR) ಮತ್ತು ಹರಿಯಾಣ ಮೂಲದ ವ್ಯಾಪ್ರೋಸ್ (WAPCOS) ಸಂಸ್ಥೆಯ ಒಟ್ಟು 13 ಮಂದಿ ಅಧಿಕಾರಿಗಳು/ಸಿಬ್ಬಂದಿ ಮಣ್ಣು ಹಾಗೂ ನೀರಿನ ಮಾದರಿ ಸಂಗ್ರಹ ಕಾರ್ಯ ನಡೆಸುತ್ತಿದ್ದರು ಎನ್ನಲಾಗಿದೆ.

ಅಧಿಕಾರಿಗಳ ಗೊಂದಲದ ಉತ್ತರ:
ಈ ವಿಷಯ ತಿಳಿದ ಸ್ಥಳೀಯರು, ಬಂಗಾರಮಕ್ಕಿ ಶ್ರೀ ಕ್ಷೇತ್ರದ ಮಾರುತಿ ಗುರೂಜಿ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನರು ಸ್ಥಳಕ್ಕಾಗಮಿಸಿ, ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಅನುಮತಿ ಪತ್ರ ಅಥವಾ ಆದೇಶದ ಪ್ರತಿಯನ್ನು ನೀಡುವಂತೆ ಕೇಳಿದರು. ಈ ವೇಳೆ ಅಧಿಕಾರಿಗಳ ತಂಡ ಗೊಂದಲದ ಉತ್ತರ ನೀಡಿದೆ. ಕನ್ನಡ ಬಲ್ಲ ಅಧಿಕಾರಿಗಳು ತಾವು ಕೃಷಿ ಅಭಿವೃದ್ಧಿ ಅಧ್ಯಯನಕ್ಕೆ ಬಂದಿದ್ದು, ಇದು ವಿದ್ಯುತ್ ಯೋಜನೆಗೆ ಸಂಬಂಧಿಸಿದ್ದಲ್ಲ ಎಂದು ಮೊದಲು ಹೇಳಿದ್ದಾರೆ. ಆದರೆ, ಮತ್ತಷ್ಟು ಪ್ರಶ್ನಿಸಿದಾಗ, ಕೆಲವು ಅಧಿಕಾರಿಗಳು ಶರಾವತಿ ಪಂಪ್ ಸ್ಟೋರೇಜ್ ಯೋಜನೆಯ ಭಾಗವಾಗಿ ಬಂದಿರುವುದನ್ನು ಒಪ್ಪಿಕೊಂಡರು.

"ಸರ್ಕಾರದ ಆದೇಶದ ಪ್ರತಿ ತೋರಿಸಿ" ಎಂದು ಸ್ಥಳೀಯ ಬಂಗಾರಮಕ್ಕೆ ದೇವಾಲಯದ ಶ್ರೀ ಮಾರುತಿ ಗುರೂಜಿ ಕೇಳಿದಾಗ, ಮೊಬೈಲ್ ನೆಟ್‌ವರ್ಕ್ ಇಲ್ಲ, ಇ-ಮೇಲ್‌ನಲ್ಲಿ ಇದೆ ಮುಂತಾಗಿ ಹಾರಿಕೆಯ ಉತ್ತರ ನೀಡಿದ್ದಾರೆ. ಯಾವುದೇ ಹಂತದಲ್ಲೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ಮಾಹಿತಿ ನೀಡದೆ ಏಕಾಏಕಿ ಬಂದಿರುವುದಕ್ಕೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಮಾತಿನ ಚಕಮಕಿ ಹೆಚ್ಚಾದಾಗ, ಸ್ಥಳೀಯರು ಅಧಿಕಾರಿಗಳ ತಂಡವನ್ನು ತಡೆದು ತಮ್ಮ ವಿರೋಧವನ್ನು ಸ್ಪಷ್ಟವಾಗಿ ಪ್ರಚುರಪಡಿಸಿದರು. ಪರಿಸ್ಥಿತಿ ತೀವ್ರಗೊಂಡಾಗ ಸ್ಥಳಕ್ಕೆ ಪೊಲೀಸರನ್ನು ಕರೆಸಲಾಯಿತು.

ಯೋಜನೆ ಹಿಂದಿನ ಶಕ್ತಿ ಬಗ್ಗೆ ಚರ್ಚೆ:
ಮಾರುತಿ ಗುರೂಜಿ ಮಾತನಾಡಿ, "ಯೋಜನೆಯ ಸುತ್ತಮುತ್ತಲಿನ 10 ಕಿ.ಮೀ ವ್ಯಾಪ್ತಿಯಲ್ಲಿ ಮಣ್ಣು ಮತ್ತು ನೀರು ಪರೀಕ್ಷೆಗೆ ಬಂದ ತಂಡ ಯಾವುದೇ ಆದೇಶ ಪ್ರತಿ ಹೊಂದಿರಲಿಲ್ಲ. ಕೆಲವರು ಕೃಷಿ ಇಲಾಖೆ, ಕೆಲವರು ಪ್ರವಾಸ ಎಂದು ಹೇಳುತ್ತಿದ್ದರು. ಇಷ್ಟೊಂದು ಸುಳ್ಳು ಹೇಳಿ ಅಧ್ಯಯನ ಮಾಡುವ ಜರೂರತ್ತಾದರೂ ಏನಿದೆ?" ಎಂದು ಪ್ರಶ್ನಿಸಿದರು. ದಾಖಲೆ ಪರಿಶೀಲಿಸಿದಾಗ, ವ್ಯಾಪ್ರೋಸ್‌ಗೆ ₹ 22 ಕೋಟಿ ವೆಚ್ಚದಲ್ಲಿ ಕಾರ್ಯ ಯೋಜನಾ ವರದಿ (DPR) ಸಿದ್ಧಪಡಿಸುವ ಹೊಣೆಗಾರಿಕೆ ನೀಡಲಾಗಿದೆ ಎಂಬುದು ತಿಳಿದು ಬಂದಿದೆ ಎಂದು ವಿವರಿಸಿದರು.

ಸ್ಥಳೀಯ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ವಿರೋಧ ವ್ಯಕ್ತಪಡಿಸಿದ್ದರೂ, ಆಡಳಿತವು ಅದನ್ನು ಮನ್ನಣೆ ನೀಡದೆ ತೀವ್ರ ಗತಿಯಿಂದ ಕೆಲಸ ಮುಂದುವರಿಸುತ್ತಿರುವುದು, ಈ ಯೋಜನೆ ಹಿಂದೆ ದೊಡ್ಡ ಶಕ್ತಿ ಇರುವುದನ್ನು ತೋರಿಸುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ತಪ್ಪೊಪ್ಪಿಗೆ ಪತ್ರ ನೀಡಿ ವಾಪಸ್:
ಸ್ಥಳೀಯರ ತೀವ್ರ ಒತ್ತಡದ ನಂತರ ಮೇಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ, ಕೆಲವು ದಾಖಲೆಗಳನ್ನು ತೋರಿಸಲಾಯಿತು. "ಸ್ಥಳೀಯರ ಒಪ್ಪಿಗೆ ಇಲ್ಲದೆ ಇನ್ನು ಮುಂದೆ ಈ ಪ್ರದೇಶಕ್ಕೆ ಬರುವುದಿಲ್ಲ" ಎಂದು ಎಲ್ಲ ಅಧಿಕಾರಿಗಳಿಂದ ತಪ್ಪು ಒಪ್ಪಿಗೆ ಪತ್ರ ಬರೆಸಿಕೊಂಡ ನಂತರ, ಸಂಜೆ 7 ಗಂಟೆ ಸುಮಾರಿಗೆ ಅವರನ್ನು ಸ್ಥಳದಿಂದ ಕಳುಹಿಸಿಕೊಡಲಾಯಿತು.
PGK

Post a Comment

Previous Post Next Post