*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್* ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಕುಮಟಾ ಕಂದಾಯ ನಿರೀಕ್ಷಕ ಬೆಳಗಾವಿಯಲ್ಲಿ ಪತ್ತೆ.

*ಪಶ್ಚಿಮಘಟ್ಟ ವಾಯ್ಸ್ ಡೈಲಿ ನ್ಯೂಸ್*  
ಕುಮಟಾ ಪುರಸಭೆಯ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಕೇಲಸದ ವಿಚಾರದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಪತ್ರ ಬರೆದಿಟ್ಟು ನಾಪತ್ತೆಯಾಗಿದ್ದ ಕುಮಟಾ ಪುರಸಭೆಯ ಕಂದಾಯ ನಿರೀಕ್ಷಕ ವೆಂಕಟೇಶ ಹರಿಜನ ಅವರು ಇಂದು ಬೆಳಗಾವಿಯಲ್ಲಿ ಪತ್ತೆಯಾಗಿದ್ದಾರೆ.
ಮಂಗಳವಾರ ರಾತ್ರಿ ಭಟ್ಕಳದಲ್ಲಿರುವ ತಮ್ಮ ಮನೆಯಿಂದ ನಾಪತ್ತೆಯಾಗುವ ಮುನ್ನ ಅವರು ಮುಖ್ಯಾಧಿಕಾರಿಯ ವಿರುದ್ಧ ಗಂಭೀರ ಆರೋಪ ಒಳಗೊಂಡ ಪತ್ರವೊಂದನ್ನು ಪುರಸಭೆಯ ಸದಸ್ಯರ ವಾಟ್ಸಾಪ್‌ ಗ್ರೂಪ್‌ಗೆ ಕಳುಹಿಸಿದ್ದರು. ಆ ಪತ್ರದಲ್ಲಿ ಅವರು, “ಅನಧಿಕೃತ ಕಟ್ಟಡಗಳಿಗೆ ಅನುಮತಿ ನೀಡುವಂತೆ ಮುಖ್ಯಾಧಿಕಾರಿ ಎಂ ಆರ್ ಸ್ವಾಮಿ ಅವರು ಒತ್ತಾಯಿಸುತ್ತಿದ್ದು, ಅದಕ್ಕೆ ವಿರೋಧ ವ್ಯಕ್ತಪಡಿಸಿದ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ” ಎಂದು ಉಲ್ಲೇಖಿಸಿದ್ದರು. ಈ ಪತ್ರ ಹೊರಬಿದ್ದ ಕೆಲ ಗಂಟೆಗಳಲ್ಲೇ ಅವರು ಕಾಣೆಯಾಗಿದ್ದರು.
ಘಟನೆ ನಂತರ ಆತಂಕಗೊಂಡ ಕುಟುಂಬಸ್ಥರು ಭಟ್ಕಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿ, ಮೊಬೈಲ್ ಸಿಗ್ನಲ್ ಆಧಾರದ ಮೇಲೆ ಹುಡುಕಾಟ ನಡೆಸುತ್ತಿದ್ದರು. ಈ ನಡುವೆ, ವೆಂಕಟೇಶ್‌ ಅವರು ಬೆಳಗಾವಿಯಿಂದ ತಮ್ಮ ಕುಟುಂಬಕ್ಕೆ ದೂರವಾಣಿ ಮೂಲಕ ಸಂಪರ್ಕಿಸಿ, ʼನಾನು ಸುರಕ್ಷಿತವಾಗಿದ್ದೇನೆ, ಬೆಳಗಾವಿಯಲ್ಲಿದ್ದೇನೆʼ ಎಂದು ತಿಳಿಸಿದ್ದಾರೆ. ಈ ಮಾಹಿತಿ ದೊರಕುತ್ತಿದ್ದಂತೆಯೇ ಭಟ್ಕಳ ಪೊಲೀಸರು ಬೆಳಗಾವಿಗೆ ತೆರಳಿ ಕ್ರಮ ಕೈಗೊಂಡಿದ್ದಾರೆ. ಪ್ರಸ್ತುತ ಅವರು ಬೆಳಗಾವಿ ನಗರದ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿದ್ದಾರೆ ಎಂದು ತಿಳಿದುಬಂದಿದೆ.
ಪೊಲೀಸರು ಈಗ ವೆಂಕಟೇಶ ಅವರ ಹೇಳಿಕೆ ದಾಖಲಿಸಲು ಸಿದ್ಧತೆ ನಡೆಸುತ್ತಿದ್ದು, ಅವರ ನಾಪತ್ತೆಯ ಹಿಂದಿರುವ ನಿಜವಾದ ಕಾರಣ ಮತ್ತು ಮುಖ್ಯಾಧಿಕಾರಿಯ ಕಿರುಕುಳದ ಆರೋಪದ ಬಗ್ಗೆ ತನಿಖೆ ನಡೆಸುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ, ವೆಂಕಟೇಶ ಹರಿಜನ ಅವರು ಕೆಲಸದ ಸ್ಥಳದಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ವಿಷಯಗಳಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು. ಪುರಸಭೆಯ ಕೆಲವು ಸದಸ್ಯರು ಸಹ ಈ ವಿಷಯದಲ್ಲಿ ಮಧ್ಯವರ್ತಿಯಾಗಿ ಮಾತನಾಡಿದ್ದರೂ, ಪರಿಸ್ಥಿತಿ ಬದಲಾಗಿರಲಿಲ್ಲ ಎಂದು ತಿಳಿದುಬಂದಿದೆ. ಮುಖ್ಯಾಧಿಕಾರಿಯ ವಿರುದ್ಧ ಬಂದಿರುವ ಆರೋಪಗಳ ಕುರಿತು ಹಿರಿಯ ಅಧಿಕಾರಿಗಳು ವರದಿ ಕೋರಿರುವುದಾಗಿಯೂ ತಿಳಿದುಬಂದಿದೆ.


PGK

Post a Comment

Previous Post Next Post