PGK NEWS:-ಚಿಕ್ಕಮಗಳೂರು : ರಾಜ್ಯದಲ್ಲಿ ಮಳೆ ಪ್ರಮಾಣ ಬಹುತೇಕ ಇಳಿಮುಖವಾದರೂ ಜಿಲ್ಲೆಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿದೆ. ಪ್ರವಾಸಿ ತಾಣಗಳಲ್ಲಿ ಬೆಟ್ಟ ಗುಡ್ಡಗಳು ಕುಸಿಯೋದು, ಮರಗಳು ಮುರಿದು ಬೀಳೋದು ಇನ್ನೂ ನಿಂತಿಲ್ಲ. ಹೀಗಾಗಿ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿಗರ ಹಿತದೃಷ್ಠಿಯಿಂದ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ ತಾಣಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.
ಎತ್ತಿನಭುಜ ಪ್ರವಾಸಿ ತಾಣಕ್ಕೆ ನಿತ್ಯ ನೂರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಟ್ರಕ್ಕಿಂಗ್ ತೆರಳಲು ಉತ್ತಮವಾದ ತಾಣ ವಾಗಿರುವುದರಿಂದ ನಿತ್ಯ ನೂರಾರು ಜನ ಚಾರಣಕ್ಕೆ ಕೂಡ ಹೋಗುತ್ತಾರೆ. ಆದರೆ, ಮೂಡಿಗೆರೆ ತಾಲೂಕಿನ ಈ ಭಾಗದಲ್ಲಿ ಕಳೆದ 15 ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ ಅಲ್ಲಲ್ಲಿ ಬೆಟ್ಟ-ಗುಡ್ಡಗಳು ಕುಸಿಯುತ್ತಿವೆ. ರಸ್ತೆ ಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಜೊತೆಗೆ ಕೆಲ ಪ್ರವಾಸಿಗರು ವಿಭಿನ್ನ ಭಂಗಿಯಲ್ಲಿ ಫೋಟೋ ತೆಗೆಯಲು ಹೋದಾಗ ಅಪಾಯಗಳು ಸಂಭವಿಸುವ ಸಾಧ್ಯತೆಯೂ ಇದೆ.
ಒಂದು ವೇಳೆ ಅಪಾಯ ಸಂಭವಿಸಿದಾಗ ತುರ್ತಾಗಿ ಸಹಾಯಕ್ಕೆ ಘಟನಾ ಸ್ಥಳಕ್ಕೆ ಹೋಗುವುದು ಕೂಡ ಕಷ್ಟ. ಹೀಗಾಗಿ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಆದೇಶದಂತೆ ಮೂಡಿಗೆರೆ ವಲಯ ಅರಣ್ಯಾಧಿಕಾರಿ ಮುಂಜಾಗ್ರತಾ ಕ್ರಮವಾಗಿ ಯಾವುದೇ ರೀತಿಯ ಪ್ರಾಣಹಾನಿ ಮತ್ತು ಅಪಾಯವನ್ನು ತಡೆಗಟ್ಟುವ ದೃಷ್ಟಿಯಿಂದ ಎತ್ತಿನಭುಜಕ್ಕೆ ಚಾರಣ ಹೋಗುವುದಕ್ಕೆ ತಾತ್ಕಾಲಿಕವಾಗಿ ಬ್ರೇಕ್ ಹಾಕಿದ್ದಾರೆ. ಇದರಿಂದ ಚಾರಣ ಪ್ರಿಯರಿಗೆ ನಿರಾಸೆ ಉಂಟು ಮಾಡಿದೆ.
ಕೊಡಚಾದ್ರಿ ಬೆಟ್ಟಕ್ಕೆ ಪ್ರವೇಶ ನಿಷೇಧ :ಇನ್ನೊಂದೆಡೆ ಮುಂಗಾರು ಮಳೆ ಹೆಚ್ಚಿರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಪ್ರಮುಖ ಜಲಪಾತ, ಸಫಾರಿ ಮತ್ತು ಚಾರಣ ತಾಣಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಕುದುರೆಮುಖದ ವನ್ಯಜೀವಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು (ಜುಲೈ 30-2023) ಆದೇಶ ಹೊರಡಿಸಿದ್ದರು. ರಾಜ್ಯದ ಪ್ರಸಿದ್ಧ ಧಾರ್ಮಿಕ ಹಾಗೂ ಚಾರಣ ತಾಣವಾದ ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಗಡಿಭಾಗವಾದ ಕೊಡಚಾದ್ರಿ ಬೆಟ್ಟಕ್ಕೂ ಪ್ರವೇಶ ನಿಷೇಧಿಸಲಾಗಿತ್ತು.
ಸ್ಥಳೀಯ ಜಲಪಾತಗಳಿಗೂಪ್ರವೇಶ ನಿಷೇಧ: ಮುಂಗಾರು ಮಳೆ ತೀವ್ರಗೊಂಡಿದ್ದು, ಜಲಪಾತಗಳ ವೀಕ್ಷಣೆಗೆ ಹೆಚ್ಚಿನ ಪ್ರವಾಸಿಗರು ಬರುವ ಸಾಧ್ಯತೆ ಇದೆ. ಪ್ರವಾಸಿಗರು ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಚಾದ್ರಿ ಮತ್ತು ಇತರ ತಾಣಗಳ ಪ್ರವೇಶಕ್ಕೆ ತಾತ್ಕಾಲಿಕ ನಿರ್ಬಂಧ ಹೇರಲಾಗಿತ್ತು. ಕೊಡಚಾದ್ರಿ ಬೆಟ್ಟದ ಜೊತೆಗೆ ಸ್ಥಳೀಯ ಜಲಪಾತಗಳಿಗೂ ಪ್ರವೇಶ ಸಹ ನಿಷೇಧಿಸಲಾಗಿತ್ತು. ಕೊಡಚಾದ್ರಿಗೆ ನಿಷೇಧ ಹೇರಿರುವುದರಿಂದ ಸ್ಥಳೀಯ ವ್ಯಾಪಾರಿಗಳಿಗೆ ಹಾಗೂ ಜೀಪ್ ಚಾಲಕರಿಗೆ ತೀವ್ರ ತೊಂದರೆ ಉಂಟಾಗಿದೆ.
ಪಶ್ಚಿಮ ಘಟ್ಟ ವಾಯ್ಸ್:- ವಿಶೇಷ ವರದಿ